ಬ್ರಾಹ್ಮಣರ ಕುರಿತ ಪೋಸ್ಟ್ ಗೆ ಕ್ಷಮೆಯಾಚಿಸಿದ ಖ್ಯಾತ ಗಾಯಕ ಲಕ್ಕಿ ಅಲಿ

Update: 2023-04-12 07:16 GMT

ಮುಂಬೈ: "ಬ್ರಾಹ್ಮಣ ಪದದ ಮೂಲ ಅಬ್ರಹಾಂ ಆಗಿದೆ" ಎಂಬ ಟಿಪ್ಪಣಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಖ್ಯಾತ ಬಾಲಿವುಡ್ ಗಾಯಕ ಲಕ್ಕಿ ಅಲಿ, ಇದೀಗ ತಮ್ಮ ಪೋಸ್ಟ್‌ಗೆ ಕ್ಷಮೆ ಯಾಚಿಸಿದ್ದು, ತಾವು ಪೋಸ್ಟ್ ಮಾಡಿದ್ದ ಟಿಪ್ಪಣಿಯನ್ನೂ ಅಳಿಸಿ ಹಾಕಿದ್ದಾರೆ.

ತಮ್ಮ ಕ್ಷಮಾಪಣೆಯಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿರುವ ಲಕ್ಕಿ ಅಲಿ, ನನ್ನ ಉದ್ದೇಶವು ಎಲ್ಲರನ್ನೂ ಸನಿಹಕ್ಕೆ ತರುವುದಾಗಿತ್ತೇ ಹೊರತು ಯಾರಿಗಾದರೂ ನೋವುಂಟು ಮಾಡುವುದಾಗಿರಲಿಲ್ಲ ಎಂದು ಹೇಳಿದ್ದು, "ಪ್ರಿಯರೆ, ನನ್ನ ಹಿಂದಿನ ಪೋಸ್ಟ್ ಕುರಿತ ವಿವಾದ ನನ್ನ ಗಮನಕ್ಕೆ ಬಂದಿದೆ. ನನ್ನ ಉದ್ದೇಶ ಯಾರಿಗಾದರೂ ನೋವುಂಟು ಮಾಡುವುದಾಗಿರಲಿಲ್ಲ. ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ನನ್ನ ಉದ್ದೇಶ ಎಲ್ಲರನ್ನೂ ಸನಿಹಕ್ಕೆ ತರುವುದಾಗಿತ್ತು. ಆದರೆ, ನಾನು ಅಂದುಕೊಂಡಂತೆ ಆಗಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ನಾನು ಮಾಡುವ ಪೋಸ್ಟ್‌ಗಳ ಬಗ್ಗೆ ಹೆಚ್ಚು ಜಾಗರೂಕನಾಗಿರುತ್ತೇನೆ ಮತ್ತು ನನ್ನ ಹಿಂದೂ ಸಹೋದರ ಮತ್ತು ಸಹೋದರಿಯರಿಗೆ ಬೇಸರ ತಂದಿರುವ ನನ್ನ ಬರವಣಿಗೆ ಶೈಲಿಯ ಕುರಿತೂ ಎಚ್ಚರಿಕೆ ವಹಿಸುತ್ತೇನೆ. ಅದಕ್ಕಾಗಿ ನಾನು ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ.." ಎಂದೂ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ತಾವು ಅಳಿಸಿ ಹಾಕಿರುವ ಪೋಸ್ಟ್‌ನಲ್ಲಿ "ಬ್ರಾಹ್ಮಣರು ಇಬ್ರಾಹಿಂ ವಂಶಸ್ಥರು. ಬ್ರಾಹ್ಮಣ ಎಂಬ ಹೆಸರು ಬ್ರಹ್ಮ ಎಂದ ಪದದಿಂದ ಬಂದಿದ್ದು, ಅದು ಅಬ್ರಹಾಂ ಅಥವಾ ಇಬ್ರಾಹಿಂ ಪದದಿಂದ ಸೃಷ್ಟಿಗೊಂಡಿದೆ.  ಹೀಗಾಗಿ ಏಕೆ ಎಲ್ಲರೂ ಈ ಕುರಿತು ವಾದಿಸದೆ ಕಾರಣವಿಲ್ಲದೆ ತಮ್ಮಲ್ಲೇ ಹೊಡೆದಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದರು.

ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿರುವ ಲಕ್ಕಿ ಅಲಿ, ಈ ಕುರಿತು ಕ್ಷಮೆ ಯಾಚಿಸಿದ್ದಾರೆ. 

ಬಾಲಿವುಡ್ ನಟ ದಿ. ಮೆಹಮೂದ್ ಅವರ ಪುತ್ರರಾದ ಲಕ್ಕಿ ಅಲಿ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು 'ಓ ಸನಂ', 'ಏಕ್ ಪಲ್ ಕ ಜೀನಾ' ಇತ್ಯಾದಿ ಗೀತೆಗಳ ಮೂಲಕ ಜನಪ್ರಿಯ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ.

Similar News