ಕೋವಿಡ್ ಸೋಂಕಿಗೆ ದೇಶದಲ್ಲಿ ಮತ್ತೆ 16 ಬಲಿ

Update: 2023-04-13 02:51 GMT

ಹೊಸದಿಲ್ಲಿ: ದೇಶದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೇಖಡ 38ರಷ್ಟು ಹೆಚ್ಚಿದೆ. ಬುಧವಾರ ದೇಶಾದ್ಯಂತ 7830 ಹೊಸ ಪ್ರಕರಣಗಳು ವರದಿಯಗಿದ್ದು, ಇದು ಕಳೆದ ವರ್ಷದ ಸೆಪ್ಟೆಂಬರ್ 2ರ ಬಳಿಕ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 16 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ. ದೆಹಲಿ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ತಲಾ ಇಬ್ಬರು ಮೃತಪಟ್ಟರೆ, ಗುಜರಾತ್, ಹರ್ಯಾಣ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲೇ ಗರಿಷ್ಠ ಕೋವಿಡ್-19 ಸಂಬಂಧಿ ಸಾವು ಹಾಗೂ ಪ್ರಕರಣಗಳನ್ನು ಕಂಡಿರುವ ಕೇರಳದಲ್ಲಿ ಐದು ಮಂದಿ ಮೃತಪಟ್ಟಿರುವ ಹಳೆ ಅಂಕಿ ಅಂಶ ಪ್ರಕಟಿಸಲಾಗಿದೆ. ಏಪ್ರಿಲ್ 11ರಂದು ದೇಶದಲ್ಲಿ 5676 ಪ್ರಕರಣಗಳು ದಾಖಲಾಗಿ, 21 ಮಂದಿ ಮೃತಪಟ್ಟಿದ್ದರು.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40215ಕ್ಕೆ ತಲುಪಿದೆ. ಇದುವರೆಗೆ 4,42,04,771 ಮಂದಿ ಗುಣಮುಖರಾಗಿದ್ದು, ಚೇತರಿಕೆ ದರ ಶೇಕಡ 98.72ರಷ್ಟಿದೆ. ಸಾವಿನ ದರ ಶೇಕಡ 1.19ರಷ್ಟಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಚಿವಾಲಯದ ಮೂಲಗಳ ಪ್ರಕಾರ, ಮುಂದಿನ 10-12 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟ ತಲಪುವ ಸಾಧ್ಯತೆ ಇದೆ.

Similar News