ಎಂ.ಪಿ.ಕುಮಾರಸ್ವಾಮಿಯವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನ: ಬಸವರಾಜ ಬೊಮ್ಮಾಯಿ

Update: 2023-04-13 06:44 GMT

ಕೊಲ್ಲೂರು, ಎ.13: ಟಿಕೆಟ್ ಸಿಗದ ಅಸಮಾಧಾನದಲ್ಲಿ ಪಕ್ಷ ತೊರೆಯುವ ನಿರ್ಧಾರ ತಳೆದಿರುವ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸಲಾಗುವುದು. ನಿನ್ನೆ ಅವರೊಂದಿಗೆ ಮಾತನಾಡಿದ್ದು ಮತ್ತೊಮ್ಮೆ ಮಾತನಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪತ್ನಿ ಸಹಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಎಂ.ಪಿ.ಕುಮಾರಸ್ವಾಮಿ ರಾಜೀನಾಮೆ ಬಗ್ಗೆ ಈಗಾಗಲೇ ಚರ್ಚೆ ಮಾಡಿದ್ದೆವೆ. ಮೂರು ಬಾರಿ ಶಾಸಕರಾಗಿದ್ದವರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ. ಅವರು ಸಂಯಮದಿಂದ ತೀರ್ಮಾನ ಮಾಡೋದು ಒಳ್ಳೆಯದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಕ್ಷ ನಡೆಸಿದ ಸರ್ವೇ ಆಧಾರ ಮೇಲೆ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡಿರುವುದರಿಂದ ಕೆಲವರನ್ನು ಪಕ್ಷ ಕೈ ಬಿಡಬೇಕಾಯಿತು ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಉಡುಪಿಯಲ್ಲಿ ಹೊಸ ಅಭ್ಯರ್ಥಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಇದು ಯಾವುದೇ ರೀತಿಯ ಪ್ರಯೋಗ ಅಲ್ಲ, ರಿಸ್ಕ್ ಅಲ್ಲ. ಈಗ ಟಿಕೆಟ್ ಪಡೆದವರು ಪ್ರಬಲ ಸಂಘಟನೆಯಿಂದ ಬಂದವರು. ಸಂಘಟನೆಯಲ್ಲಿ ಪ್ರಬಲ, ಅತ್ಯಂತ ಗಟ್ಟಿ ಇರುವವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ, ನಾಯಕನಾಗಿ ನನ್ನ ಟೀಕೆ ಸಹಜ. ಇದನ್ನು ಸ್ಪರ್ಧಾತ್ಮಕವಾಗಿ ಎದುರಿಸುತ್ತೇನೆ ಎಂದು ನುಡಿದರು.

ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ಜೊತೆಗೆ ಕೊಲ್ಲೂರು ಮೂಕಾಂಬಿಕಾ ದರ್ಶನ ಮಾಡಿದ ಕುರಿತು ಮಾಧ್ಯಮದವರು ಕೇಳಿದಾಗ, ಅವರು ಕೊಲ್ಲೂರು ಬರುವ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಅವರು ಮೊದಲಿಂದಲೂ ಒಳ್ಳೆಯ ಸ್ನೇಹಿತರು. ಅವರು ನಮ್ಮ ಸಿದ್ದಾಂತದ ಹತ್ತಿರ ಇರುವವರು. ಆದರೆ ಚುನಾವಣೆ ಪ್ರಚಾರದ ವಿಚಾರವಾಗಿ ಅವರ ಜೊತೆ ಮಾತನಾಡಿಲ್ಲ. ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಯಾವುದೇ ಪ್ಲ್ಯಾನ್ ಸದ್ಯಕ್ಕಿಲ್ಲ ಎಂದರು.

 ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಯ ಕುರಿತು ಪ್ರಶ್ನಿಸಿದಾಗ, ಕೊಲ್ಲೂರು ದೇವಿಯಲ್ಲಿ ಕನ್ನಡ ಜನರ ಸುಬಿಕ್ಷೇ ಬೇಡಿಕೊಂಡೆ. ನವ ನಾಡು ಜನರಿಗೆ ಒಳ್ಳೆಯದಾಗಲಿ ಅಂತ ಬೇಡಿಕೊಂಡೆ ಎಂದರು.

Similar News