ಕಳ್ಳತನ ಶಂಕೆ: ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿ ಕೊಂದ ದುಷ್ಕರ್ಮಿಗಳು

Update: 2023-04-13 15:52 GMT

ಲಕ್ನೋ: ಕಳ್ಳತನದ ಅನುಮಾನದ ಮೇಲೆ 32 ವರ್ಷದ ವ್ಯಕ್ತಿಯನ್ನು ಥಳಿಸಿ ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್‌ ಆಗಿದ್ದು, ಕೊಲೆ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಎಂಟು ಮಂದಿಯ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ಮೃತರನ್ನು ಶಿವಂ ಜೋಹ್ರಿ ಎಂದು ಗುರುತಿಸಲಾಗಿದೆ. ಸಂತ್ರಸ್ತ ವ್ಯಕ್ತಿ ಸಾರಿಗೆ ಉದ್ಯಮಿ ಬಂಕಿಮ್ ಸೂರಿ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.  ಕಳ್ಳತನದ ಆರೋಪದ ಮೇಲೆ ಹಲವಾರು ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಕನ್ಹಿಯಾ ಹೊಸೈರಿಯ ಮಾಲೀಕ ನೀರಜ್ ಗುಪ್ತಾ ಅವರು ಜೋಹ್ರಿಯನ್ನು ಮತ್ತೊಬ್ಬ ಆರೋಪಿ ಕುನಾಲ್ ಅರೋರಾ ಅವರ ಗಾರ್ಮೆಂಟ್ಸ್ ಸಂಸ್ಥೆಗೆ ಕರೆದೊಯ್ದಿದ್ದು, ಅಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

"ಪೊಲೀಸ್ ದೂರಿನ ಪ್ರಕಾರ, ಜೋಹ್ರಿ ಅವರನ್ನು ಕಂಬಕ್ಕೆ ಕಟ್ಟಿ, ಅವರ ಶರ್ಟ್ ತೆಗೆದು ಬೆಲ್ಟ್‌ನಿಂದ ಪದೇ ಪದೇ ಹೊಡೆದಿದ್ದಾರೆ" ಎಂದು ಸರ್ಕಲ್ ಆಫೀಸರ್ ಬಿಎಸ್ ವೀರ್ ತಿಳಿಸಿದ್ದಾರೆ..

 ಥಳಿತದಿಂದ ಮೃತಪಟ್ಟ ಬಳಿಕ ಅವರ ಮೃತದೇಹವನ್ನು ಮಂಗಳವಾರ ರಾತ್ರಿ ವೈದ್ಯಕೀಯ ಕಾಲೇಜಿನ ಬಳಿ ಬಿಟ್ಟು ಆರೋಪಿಗಳು ಹೋಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.  

 ಜೋಹ್ರಿಯನ್ನು ಹೊಡೆದು ಸಾಯಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಬುಧವಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಸೂರಿ, ಗುಪ್ತಾ ಮತ್ತು ಅರೋರಾ ಸೇರಿದಂತೆ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Similar News