ಭಾರತೀಯರನ್ನು ವಿಭಜಿಸಲು ಅಧಿಕಾರ ದುರುಪಯೋಗ ಮಾಡುತ್ತಿರುವವರು ನಿಜವಾದ ದೇಶದ್ರೋಹಿಗಳು: ಸೋನಿಯಾ ಗಾಂಧಿ

"ಸಂವಿಧಾನವನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕು"

Update: 2023-04-14 10:55 GMT

ಹೊಸದಿಲ್ಲಿ: ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಎಪ್ರಿಲ್ 14ರಂದು ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಆಡಳಿತಾರೂಢರು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮತ್ತು ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ಜನರು ಈ ವ್ಯವಸ್ಥಿತ ದಾಳಿಯಿಂದ ಸಂವಿಧಾನವನ್ನು ರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನದ ಅಂಗವಾಗಿ The Telegraph ಪತ್ರಿಕೆಗೆ ಲೇಖನವೊಂದನ್ನು ಬರೆದಿರುವ ಸೋನಿಯಾ ಗಾಂಧಿ, ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಧರ್ಮ, ಭಾಷೆ, ಜಾತಿ ಮತ್ತು ಲಿಂಗದ ನೆಲೆಯಲ್ಲಿ ಭಾರತೀಯರನ್ನು ಪರಸ್ಪರ ವಿಭಜಿಸುತ್ತಿರುವವರೇ ಈ ಹೊತ್ತು ನಿಜವಾದ ದೇಶದ್ರೋಹಿಗಳು ಎಂದು ಕಿಡಿ ಕಾರಿದ್ದಾರೆ.

"ನಾವಿಂದು ಬಾಬಾ ಸಾಹೇಬರ ಪರಂಪರೆಯನ್ನು ಗೌರವಿಸುತ್ತಿದ್ದರೂ, ಸಂವಿಧಾನದ ಯಶಸ್ಸು ಜನರ ಆಳುವ ಕರ್ತವ್ಯದೊಂದಿಗೆ ಅವರ ನಡತೆಯನ್ನು ಆಧರಿಸಿರುತ್ತದೆ ಎಂಬ ಅವರ ಭವಿಷ್ಯದ ಎಚ್ಚರಿಕೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯೂ ಆದ ಸೋನಿಯಾ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಇಂದು ಆಡಳಿತಾರೂಢರು ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮತ್ತು ನಾಶ ಮಾಡುತ್ತಿದ್ದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ತಳಹದಿಯನ್ನೇ ದುರ್ಬಲಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

"ನಾವೊಂದು ವೇಳೆ ಸಂವಿಧಾನವನ್ನು ರಕ್ಷಿಸಲು ಬಯಸಿದ್ದೇ ಆದರೆ, ನಮ್ಮ ಮಾರ್ಗದುದ್ದಕ್ಕೂ ಇರುವ ದುಷ್ಟತನಗಳನ್ನು ಗುರುತಿಸಿ, ನಿರ್ಧರಿಸಲು ಸೋಮಾರಿತನ ಪ್ರದರ್ಶಿಸಬಾರದು ಅಥವಾ ಅವನ್ನು ಕಿತ್ತೊಗೆಯುವ ನಮ್ಮ ಉಪಕ್ರಮದಲ್ಲಿ ದುರ್ಬಲರೂ ಆಗಿರಬಾರದು. ಅದೊಂದೇ ದೇಶ ಸೇವೆಗಿರುವ ಮಾರ್ಗ. ಇದಕ್ಕಿಂತ ಉತ್ತಮ ಮಾರ್ಗ ನನಗೆ ತಿಳಿದಿಲ್ಲ" ಎಂದು ಸಂವಿಧಾನ ಸದನ ಸಮಿತಿ ಸಭೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಆಡಿದ್ದ ಕೊನೆಯ ಮಾತನ್ನು ಸೋನಿಯಾ ಗಾಂಧಿ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಬರಲಿರುವ ವರ್ಷಗಳಲ್ಲಿ ಈ ಮಾತುಗಳೇ ನಮ್ಮ ನಿರ್ಧಾರವಾಗಬೇಕು ಎಂದೂ ಅವರು ಹೇಳಿದ್ದಾರೆ. ಅಂಬೇಡ್ಕರ್ ಅವರ ಅದ್ಭುತ ಜೀವನಗಾಥೆಯು ಇಂದು ಪ್ರತಿಯೊಬ್ಬ ಭಾರತೀಯನಿಗೂ ಸುದೀರ್ಘ ಪ್ರೇರಣೆಯಾಗಿದೆ ಎಂದು ಸೋನಿಯಾ ಗಾಂಧಿ ತಮ್ಮ ಲೇಖನದಲ್ಲಿ ಶ್ಲಾಘಿಸಿದ್ದಾರೆ.

Similar News