×
Ad

ವಿಚಾರಣಾ ನ್ಯಾಯಾಲಯದ ತೀರ್ಪು ಅನ್ಯಾಯ, ನ್ಯಾಯಾಧೀಶರನ್ನು ದಾರಿ ತಪ್ಪಿಸಲಾಗಿದೆ: ರಾಹುಲ್ ಗಾಂಧಿ ಪರ ವಕೀಲರ ವಾದ

ಮಾನಹಾನಿ ಪ್ರಕರಣ

Update: 2023-04-14 16:32 IST

ಸೂರತ್: ನ್ಯಾಯಾಧೀಶರನ್ನು ದಾರಿ ತಪ್ಪಿಸಿರುವುದರಿಂದ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿಚಾರಣೆ ನ್ಯಾಯೋಚಿತವಾಗಿ ನಡೆದಿಲ್ಲ ಎಂದು ರಾಹುಲ್ ಗಾಂಧಿ ಪರ ವಕೀಲರು ಸೂರತ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದೆದುರು ಗುರುವಾರ ವಾದ ಮಂಡಿಸಿದರು ಎಂದು Bar and Bench ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಉಪನಾಮದ ಕುರಿತ ತನ್ನ ಹೇಳಿಕೆಯ ಪ್ರಕರಣದಲ್ಲಿ ನೀಡಿರುವ ಶಿಕ್ಷೆಗೆ ತಡೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಆಲಿಸುತ್ತಿದೆ. 2019ರ ಲೋಕಸಭಾ ಚುನಾವಣೆಗೂ ಮುನ್ನ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಕಳ್ಳರೆಲ್ಲ ಮೋದಿ ಉಪನಾಮವನ್ನೇಕೆ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದರು. 

ಈ ಕುರಿತು ದಾಖಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ಮಾರ್ಚ್ 23ರಂದು ರಾಹುಲ್ ಗಾಂಧಿಗೆ ಎರಡು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 (ಮಾನಹಾನಿ) ಹಾಗೂ ಸೆಕ್ಷನ್ 500 (ಮಾನಹಾನಿಗಾಗಿ ಶಿಕ್ಷೆ) ಅಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿಕ್ಷೆಗೊಳಗಾಗಿದ್ದರು. ಹೀಗಿದ್ದೂ, ಅವರಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯವು, 30 ದಿನಗಳ ಕಾಲ ತೀರ್ಪನ್ನು ಅಮಾನತುಗೊಳಿಸಿತ್ತು.

ರಾಹುಲ್ ಗಾಂಧಿ ಶಿಕ್ಷೆಗೊಳಗಾದ ಮರು ದಿನವೇ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಯಾವುದೇ ಶಾಸನ ಸಭೆಯ ಸದಸ್ಯರು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಕ್ಷೆಗೆ ಒಳಪಟ್ಟರೆ ಅಂಥವರು ಕೂಡಲೇ ಅನರ್ಹಗೊಳ್ಳುತ್ತಾರೆ ಮತ್ತು ಶಿಕ್ಷೆ ಪೂರೈಸಿದ ದಿನದಿಂದ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ.

ಒಂದು ವೇಳೆ ನ್ಯಾಯಾಲಯವೇನಾದರೂ ರಾಹುಲ್ ಗಾಂಧಿಯ ಶಿಕ್ಷೆಗೆ ತಡೆ ನೀಡಿದರೆ ಅವರ ಲೋಕಸಭಾ ಸದಸ್ಯತ್ವದ ಅನರ್ಹತೆಯನ್ನು ಹಿಂಪಡೆಯಲಾಗುತ್ತದೆ. ಎಪ್ರಿಲ್ 3ರಂದು ಸೂರತ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ರಾಹುಲ್ ಗಾಂಧಿಯವರ ಜಾಮೀನು ಅವಧಿಯನ್ನು ಎಪ್ರಿಲ್ 13ರವರೆಗೆ ವಿಸ್ತರಿಸಿತ್ತು.

ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಪರ ವಾದಿಸಿದ ಹಿರಿಯ ವಕೀಲ ಆರ್.ಎಸ್.ಚೀಮಾ, ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ರಾಜಕಾರಣಿಯ ಮೂಲ ಭಾಷಣವನ್ನು ಪರಿಗಣಿಸುವ ಬದಲು ಮಾಧ್ಯಮ ವರದಿಗಳನ್ನು ಅವಲಂಬಿಸಿದ್ದಾರೆ ಎಂದು ವಾದಿಸಿದರು. "ಭಾಷಣದ ಸಿಡಿಗಿಂತ ಭಿನ್ನವಾದ ದಿನಪತ್ರಿಕೆಗಳ ವರದಿಗಳನ್ನು ಸಾಕ್ಷಿಯಾಗಿ ಪರಿಗಣಿಸಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಎಲ್ಲ ತೀರ್ಮಾನ ಕೈಗೊಂಡು ತೀರ್ಪು ನೀಡಿರುವುದು ನನಗೆ ತುಂಬಾ ವಿಚಿತ್ರವಾಗಿ ಕಾಣಿಸುತ್ತಿದೆ" ಎಂದು ಚೀಮಾ ನ್ಯಾಯಾಲಯಕ್ಕೆ ಹೇಳಿದ್ದಾರೆ.

ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಎಚ್ಚರಿಕೆಗೆ ಯಾವುದೇ ಕಿಮ್ಮತ್ತು ನೀಡದೆ ಉದ್ಧಟತನದಿಂದ ವರ್ತಿಸಿದ್ದಾರೆ ಎಂಬ ವಿಚಾರಣಾ ನ್ಯಾಯಾಲಯದ ಹೇಳಿಕೆಯಿಂದ ನನಗೆ ಆಘಾತವಾಗಿದೆ ಎಂದು ಹೇಳಿದ ಚೀಮಾ, "ನಾನು ಶಕ್ತಿಶಾಲಿ ಪದಗಳನ್ನು ಬಳಸುತ್ತಿರುವುದಕ್ಕೆ ಕ್ಷಮೆಯಿರಲಿ. ಆದರೆ, ನ್ಯಾಯಾಧೀಶರು ದಾರಿ ತಪ್ಪಿದ್ದಾರೆ ಮತ್ತು ದುಡುಕಿನಿಂದ ವರ್ತಿಸಿದ್ದಾರೆ" ಎಂದು ವಾದಿಸಿದರು.

ವಿಚಾರಣಾ ನ್ಯಾಯಾಲಯದ ಕ್ಷಮಾಪಣೆ ಕುರಿತ ಉಲ್ಲೇಖವು ದಾರಿ ತಪ್ಪಿಸುವಂತಿದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದ ಹಿರಿಯ ವಕೀಲ ಚೀಮಾ, 2019ರಲ್ಲಿ ರಾಹುಲ್ ಗಾಂಧಿ ಮೋದಿ ಕುರಿತು ಭಾಷಣ ಮಾಡಿದ್ದರು ಮತ್ತು ಮತ್ತೊಂದು ಹೇಳಿಕೆ ಕುರಿತು ಆ ವರ್ಷದ ನವೆಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಯ ವಿಚಾರಣೆ ಕೈಗೊಂಡಿತ್ತು ಎಂದೂ ನ್ಯಾಯಾಲಯಕ್ಕೆ ತಿಳಿಸಿದರು.

"ಹೀಗಾಗಿ ಅದು ಹೇಗೆ ನನ್ನ ಕಕ್ಷಿದಾರರಿಗೆ ಉನ್ನತ ನ್ಯಾಯಾಲಯ ಬುದ್ಧಿ ಹೇಳಿದೆ ಎಂಬ ದೂರುದಾರರ ವಾದವನ್ನು ನ್ಯಾಯಾಧೀಶರು ಅವಲಂಬಿಸಲು ಸಾಧ್ಯ?" ಎಂದು ಚೀಮಾ ಪ್ರಶ್ನಿಸಿದರು. ಒಂದು ವೇಳೆ ರಾಹುಲ್ ಗಾಂಧಿಗೆ ಎರಡು ವರ್ಷಕ್ಕಿಂತ ಒಂದು ದಿನ ಕಡಿಮೆ ಶಿಕ್ಷೆ ವಿಧಿಸಿದರೂ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳ್ಳುತ್ತಿರಲಿಲ್ಲ ಎಂಬ ಸಂಗತಿ ವಿಚಾರಣಾ ನ್ಯಾಯಾಲಯಕ್ಕೆ ತಿಳಿದಿತ್ತು ಎಂದೂ ಅವರು ವಾದಿಸಿದರು.

Similar News