ಪ್ರಧಾನಿ ಪುಲ್ವಾಮಾ ಲೋಪಗಳ ಬಗ್ಗೆ ನನ್ನನ್ನು ಮೌನವಾಗಿಸಿದ್ದರು: ಸತ್ಯಪಾಲ್ ಮಲಿಕ್
ಮೋದಿ ಭ್ರಷ್ಟಾಚಾರಕ್ಕೆ ಹೆಚ್ಚೇನೂ ವಿರುದ್ಧವಾಗಿಲ್ಲ ಎಂದ ಕಾಶ್ಮೀರದ ಮಾಜಿ ರಾಜ್ಯಪಾಲ
ಹೊಸದಿಲ್ಲಿ: ಮೋದಿ ಸರಕಾರ, ಬಿಜೆಪಿ ಮತ್ತು ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ಭೂಕಂಪವನ್ನುಂಟು ಮಾಡಬಹುದಾದ ಸಂದರ್ಶನವೊಂದರಲ್ಲಿ ಸತ್ಯಪಾಲ ಮಲಿಕ್ ಅವರು, ‘ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರಕ್ಕೆ ಹೆಚ್ಚೇನೂ ವಿರುದ್ಧವಾಗಿಲ್ಲ’ ಎಂದು ಹೇಳಿದ್ದಾರೆ. ಜಮ್ಮು-ಕಾಶ್ಮೀರವು ವಿಭಜನೆಗೊಂಡು ಕೇಂದ್ರಾಡಳಿತ ಪ್ರದೇಶವಾಗುವ ಮುನ್ನ ಮಲಿಕ್ ಅದರ ಕೊನೆಯ ರಾಜ್ಯಪಾಲರಾಗಿದ್ದರು.
2019ರ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿ ನಡೆದ ಮತ್ತು ಅದೇ ವರ್ಷದ ಆಗಸ್ಟ್ನಲ್ಲಿ ಸಂವಿಧಾನದ ವಿಧಿ 370ನ್ನು ರದ್ದುಗೊಳಿಸಿದ ಸಂದರ್ಭಗಳಲ್ಲಿ ರಾಜ್ಯಪಾಲರಾಗಿದ್ದ ಮಲಿಕ್, ಪ್ರಧಾನಿಗೆ ಕಾಶ್ಮೀರದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ ಮತ್ತು ಅವರು ಅಜ್ಞಾನಿಯಾಗಿದ್ದಾರೆ. ಪುಲ್ವಾಮಾದಲ್ಲಿ ಯೋಧರ ಮೇಲೆ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಕಾರಣವಾಗಿದ್ದ ಕೇಂದ್ರ ಗೃಹ ಸಚಿವಾಲಯದ ಲೋಪಗಳ ಬಗ್ಗೆ ಮಾತನಾಡದಂತೆ ಅವರು ತನಗೆ ಸೂಚಿಸಿದ್ದರು ಎಂದೂ thewire.in ಸುದ್ದಿ ಜಾಲತಾಣಕ್ಕಾಗಿ ಕರಣ್ ಥಾಪರ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಸಂದರ್ಶನದಲ್ಲಿ ಮಲಿಕ್ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ವಾಹನಗಳ ಮೇಲಿನ ದಾಳಿಯು ಭಾರತೀಯ ವ್ಯವಸ್ಥೆಯ, ವಿಶೇಷವಾಗಿ ಸಿಆರ್ಪಿಎಫ್ ಮತ್ತು ಗೃಹ ಸಚಿವಾಲಯಗಳ ಅದಕ್ಷತೆ ಮತ್ತು ಬೇಜವಾಬ್ದಾರಿಯ ಫಲಶ್ರುತಿಯಾಗಿತ್ತು ಎಂದಿದ್ದಾರೆ. ಆ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಕೇಂದ್ರ ಗೃಹಸಚಿವರಾಗಿದ್ದರು. ಹೇಗೆ ಸಿಆರ್ಪಿಎಫ್ ತನ್ನ ಯೋಧರನ್ನು ಸಾಗಿಸಲು ವಿಮಾನಕ್ಕಾಗಿ ಕೋರಿತ್ತು, ಆದರೆ ಗೃಹಸಚಿವಾಲಯವು ಅದನ್ನು ನಿರಾಕರಿಸಿತ್ತು ಎನ್ನುವುದರ ಕುರಿತು ವ್ಯಾಪಕ ವಿವರಗಳನ್ನು ಮಲಿಕ್ ತನ್ನ ಸಂದರ್ಶನದಲ್ಲಿ ನೀಡಿದ್ದಾರೆ. ವಾಹನಗಳು ಸಾಗಬೇಕಿದ್ದ ಮಾರ್ಗದ ಭದ್ರತಾ ಪರಿಶೀಲನೆಯನ್ನು ಹೇಗೆ ಸರಿಯಾಗಿ ಮಾಡಲಾಗಿರಲಿಲ್ಲ ಎಂಬ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ, ಪುಲ್ವಾಮಾ ದಾಳಿಯ ಬೆನ್ನಲ್ಲೇ ಕೊರ್ಬೆಟ್ ಪಾರ್ಕ್ ನ ಹೊರಗಿನಿಂದ ಮೋದಿಯವರು ತನಗೆ ಕರೆ ಮಾಡಿದಾಗ ಈ ಎಲ್ಲ ಲೋಪಗಳನ್ನು ತಾನು ನೇರವಾಗಿ ಎತ್ತಿದ್ದೆ, ಆದರೆ ಈ ಬಗ್ಗೆ ಸುಮ್ಮನಿರುವಂತೆ ಮತ್ತು ಯಾರಿಗೂ ತಿಳಿಸದಂತೆ ಪ್ರಧಾನಿ ತನಗೆ ಸೂಚಿಸಿದ್ದರು ಎಂದು ಮಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ತನಗೆ ಇದೇ ಸೂಚನೆಯನ್ನು ನೀಡಿದ್ದರು. ದಾಳಿಯ ಆರೋಪವನ್ನು ಪಾಕಿಸ್ತಾನದ ಮೇಲೆ ಹೊರಿಸುವುದು ಹಾಗೂ ಸರಕಾರ ಮತ್ತು ಬಿಜೆಪಿಗೆ ಚುನಾವಣಾ ಲಾಭಗಳನ್ನು ಪಡೆಯುವುದು ಉದ್ದೇಶವಾಗಿದೆ ಎನ್ನುವುದು ತನಗೆ ತಕ್ಷಣಕ್ಕೆ ಅರ್ಥವಾಗಿತ್ತು ಎಂದು ಮಲಿಕ್ ಹೇಳಿದ್ದಾರೆ.
ತಾನು ಜಮ್ಮು-ಕಾಶ್ಮೀರದ ರಾಜ್ಯಪಾಲನಾಗಿದ್ದಾಗ ಜಲವಿದ್ಯುತ್ ಯೋಜನೆ ಮತ್ತು ರಿಲಯನ್ಸ್ ವಿಮಾ ಯೋಜನೆಗೆ ಅನುಮತಿ ನೀಡುವಂತೆ ಬಿಜೆಪಿ-ಆರೆಸ್ಸೆಸ್ ನಾಯಕ ರಾಮ ಮಾಧವ ತನಗೆ ಗಂಟು ಬಿದ್ದಿದ್ದರು. ಆದರೆ ‘ನಾನು ತಪ್ಪು ಕೆಲಸವನ್ನು ಮಾಡುವುದಿಲ್ಲ ’ಎಂದು ಸ್ಪಷ್ಟವಾಗಿ ಹೇಳುವ ಮೂಲಕ ನಿರಾಕರಿಸಿದ್ದೆ. ಇವೆರಡೂ ಯೋಜನೆಗಳಿಗೆ ಅನುಮತಿ ನೀಡಿದರೆ ತಾನು 300 ಕೋ.ರೂ.ಗಳನ್ನು ಪಡೆಯಬಹುದು ಎಂದು ಆಗ ಕೆಲವರು ತನಗೆ ಹೇಳಿದ್ದರು ಎಂದು ಮಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಧಾನಿಯವರಿಗೆ ಕಾಶ್ಮೀರದ ಬಗ್ಗೆ ತಿಳುವಳಿಕೆಯಿಲ್ಲ ಎಂದು ಹೇಳಿರುವ ಮಲಿಕ್,ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಹಿಂದೆಗೆದುಕೊಂಡಿದ್ದು ತಪ್ಪಾಗಿದೆ ಮತ್ತು ಅದನ್ನು ತಕ್ಷಣ ಮರುಸ್ಥಾಪಿಸಬೇಕು ಎಂದರು.
ಮೋದಿಯವರ ಕುರಿತು ಮಾತನಾಡಿದ ಮಲಿಕ್,ಅವರಿಗೆ ಭ್ರಷ್ಟಾಚಾರದ ಬಗ್ಗೆ ಕಿಂಚಿತ್ತೂ ಕಳವಳವಿಲ್ಲ. ತಾನು ಗೋವಾದ ರಾಜ್ಯಪಾಲನಾಗಿದ್ದಾಗ ಸರಕಾರವು ಕಡೆಗಣಿಸಿದ್ದ ಹಲವಾರು ಭ್ರಷ್ಟಾಚಾರಗಳನ್ನು ತಾನು ಪ್ರಧಾನಿಯವರ ಗಮನಕ್ಕೆ ತಂದಿದ್ದೆ ಮತ್ತು ಇದೇ ಕಾರಣಕ್ಕಾಗಿ ಆಗಸ್ಟ್ 2020ರಲ್ಲಿ ತನ್ನನ್ನು ಮೇಘಾಲಯಕ್ಕೆ ಎತ್ತಂಗಡಿ ಮಾಡಲಾಗಿತ್ತು. ಪ್ರಧಾನಿಯವರ ಸುತ್ತಲಿನ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಅದಕ್ಕಾಗಿ ಆಗಾಗ್ಗೆ ಪ್ರಧಾನಿ ಕಚೇರಿಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.