ಐಪಿಎಲ್: ಬ್ರೂಕ್ ಶತಕ, ಕೆಕೆಆರ್ ಗೆಲುವಿಗೆ 229 ರನ್ ಗುರಿ ನೀಡಿದ ಹೈದರಾಬಾದ್
ಕೋಲ್ಕತಾ, ಎ.14: ಆರಂಭಿಕ ಬ್ಯಾಟರ್ ಹ್ಯಾರಿ ಬ್ರೂಕ್ ಶತಕ(ಔಟಾಗದೆ 100, 55 ಎಸೆತ,12 ಬೌಂಡರಿ, 3 ಸಿಕ್ಸರ್)ಹಾಗೂ ನಾಯಕ ಮರ್ಕ್ರಮ್ ಅರ್ಧಶತಕದ(50 ರನ್, 26 ಎಸೆತ, 2 ಬೌಂಡರಿ, 5 ಸಿಕ್ಸರ್) ಕೊಡುಗೆಯ ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್‌ಗೆ ಐಪಿಎಲ್‌ನ 19ನೇ ಪಂದ್ಯದ ಗೆಲುವಿಗೆ 229 ರನ್ ಗುರಿ ನೀಡಿದೆ.
ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಬ್ರೂಕ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 46 ರನ್ ಜೊತೆಯಾಟ ನಡೆಸಿದರು. ಎಂದಿನಂತೆ ಮಯಾಂಕ್ ಅಗರ್ವಾಲ್(9 ರನ್)ಹಾಗೂ ರಾಹುಲ್ ತ್ರಿಪಾಠಿ(9 ರನ್) ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು. ಆಗ ತಂಡಕ್ಕೆ ಆಸರೆಯಾಗಿ ನಿಂತ ಬ್ರೂಕ್ ಹಾಗೂ ಮರ್ಕ್ರಮ್ 3ನೇ ವಿಕೆಟಿಗೆ 72 ರನ್ ಜೊತೆಯಾಟ ನಡೆಸಿದರು.
ಮರ್ಕ್ರಮ್ ನಿರ್ಗಮಿಸಿದ ನಂತರ ಅಭಿಷೇಕ್ ಶರ್ಮಾ(32 ರನ್,17 ಎಸೆತ) ಜೊತೆ ಕೈಜೋಡಿಸಿದ ಬ್ರೂಕ್ 4ನೇ ವಿಕೆಟ್‌ಗೆ ಇನ್ನೂ 72 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಲು ನೆರವಾದರು. ಕ್ಲಾಸನ್(ಔಟಾಗದೆ 16) ಜೊತೆ 5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 27 ರನ್ ಸೇರಿಸಿದ ಬ್ರೂಕ್ ತಂಡದ ಮೊತ್ತವನ್ನು 228 ರನ್‌ಗೆ ತಲುಪಿಸಿದರು.
ಕೆಕೆಆರ್ ಪರ ಆ್ಯಂಡ್ರೆ ರಸೆಲ್ (3-22)ಯಶಸ್ವಿ ಬೌಲರ್ ಎನಿಸಿಕೊಂಡರು.