ಉತ್ತರಪ್ರದೇಶ ಸರಕಾರ ಚುನಾವಣೆ ಮೇಲೆ ಕಣ್ಣಿಟ್ಟು ಎನ್ಕೌಂಟರ್ ಗಳನ್ನು ಮಾಡುತ್ತಿದೆ: ಅಖಿಲೇಶ್ ಯಾದವ್ ಆರೋಪ
ಮೋವ್ (ಮಧ್ಯಪ್ರದೇಶ), ಎ. 14: ಉತ್ತರಪ್ರದೇಶದ ಬಿಜೆಪಿ ಸರಕಾರವು ಚುನಾವಣೆಗಳ ಮೇಲೆ ಕಣ್ಣಿಟ್ಟು ಎನ್ಕೌಂಟರ್ ಗಳನ್ನು ನಡೆಸುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದಾರೆ.
ಉತ್ತರಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ತಂಡವೊಂದು ಝಾನ್ಸಿಯಲ್ಲಿ ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿ ಆತಿಕ್ ಅಹ್ಮದ್ನ ಮಗ ಅಸಾದ್ ಮತ್ತು ಅವನ ಸಂಗಡಿಗನನ್ನು ಎನ್ಕೌಂಟರ್ನಲ್ಲಿ ಕೊಂದ ಒಂದು ದಿನದ ಬಳಿಕ ಅಖಿಲೇಶ್ ಈ ಆರೋಪ ಮಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಎರಡು ತಿಂಗಳ ಹಿಂದೆ ನಡೆದ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅಹ್ಮದ್, ಅವರ ಮಗ ಮತ್ತು ಇತರ ಹಲವಾರು ಮಂದಿ ಆರೋಪಿಗಳಾಗಿದ್ದಾರೆ.
ಭಾರತೀಯ ಸಂವಿಧಾನದ ರೂವಾರಿ ಡಾ. ಬಿ. ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ‘‘ಅಂಬೇಡ್ಕರ್ ರೂಪಿಸಿದ ಸಂವಿಧಾನ ಅಪಾಯದಲ್ಲಿದೆ. ಒಂದರ ಬಳಿಕ ಒಂದರಂತೆ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಮುಗಿಸಲಾಗುತ್ತಿದೆ. ಸಂವಿಧಾನವನ್ನು ನಾಶಪಡಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಬಿಜೆಪಿ ಸರಕಾರಗಳು ಕಾರ್ಯಪ್ರವೃತ್ತವಾಗಿವೆ’’ ಎಂದು ಅವರು ಅಭಿಪ್ರಾಯಪಟ್ಟರು.