ಮೋದಿಜಿ, ನೀವು ಇಡೀ ದೇಶದ ಮಾತು ಆಲಿಸುತ್ತೀರಿ, ನನ್ನ ಮಾತನ್ನೂ ಕೇಳಿ: ಕಾಶ್ಮೀರದ ಪುಟ್ಟ ಬಾಲಕಿಯ ವೀಡಿಯೊ ವೈರಲ್
ಕಥುವಾ,ಎ.14: ಪುಟ್ಟ ಬಾಲಕಿ ಸೀರತ್ ನಾಝ್ ಶಾಲೆಯಲ್ಲಿ ತನ್ನ ಗೆಳತಿಯರೊಂದಿಗೆ ಕೊಳಕಾದ ನೆಲದಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆಯಿಂದ ಬೇಸರಗೊಂಡಿದ್ದಾಳೆ ಮತ್ತು ಈ ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರು ಈ ಬಗ್ಗೆ ಏನಾದರೂ ಮಾಡಬೇಕು ಎಂದು ಬಯಸಿದ್ದಾಳೆ.
ಫೇಸ್ಬುಕ್ ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಜಮ್ಮು-ಕಾಶ್ಮೀರದ ಲೋಹಾಯಿ-ಮಲ್ಹಾರ್ ಗ್ರಾಮದ ಸರಕಾರಿ ಶಾಲಾ ವಿದ್ಯಾರ್ಥಿನಿ ನಾಝ್, ‘ಮೋದಿಜಿ,ಹೇಗಿದ್ದೀರಿ? ನನಗೆ ನಿಮ್ಮೊಂದಿಗೆ ಒಂದು ಮಾತನ್ನು ಹೇಳಬೇಕಿದೆ. ನೀವು ಎಲ್ಲರ ಮಾತುಗಳನ್ನೂ ಆಲಿಸುತ್ತೀರಿ,ಇಂದು ನನ್ನ ಮಾತನ್ನೂ ಕೇಳಿ’ಎಂದು ಆರಂಭಿಸಿದ್ದಾಳೆ.
ನಂತರ ವಿಡಿಯೋದಲ್ಲಿ ದುರವಸ್ಥೆಯಲ್ಲಿರುವ ತನ್ನ ಶಾಲೆಯ ತರಗತಿಯಲ್ಲಿನ ಕೊಳಕು ನೆಲ, ಬೆಂಚ್ ಗಳ ಅನುಪಸ್ಥಿತಿಯಲ್ಲಿ ತಾನು ಕುಳಿತುಕೊಳ್ಳುವ ಗೋಣಿಚೀಲ, ಐದು ವರ್ಷಗಳಿಂದಲೂ ಅಪೂರ್ಣವಾಗಿರುವ ಶಾಲಾ ಕಟ್ಟಡ ಇತ್ಯಾದಿಗಳನ್ನು ತೋರಿಸಿರುವ ನಾಝ್, ಮೋದಿಜಿ, ದಯವಿಟ್ಟು ನಮಗಾಗಿ ಒಳ್ಳೆಯ ಶಾಲೆಯನ್ನು ನಿರ್ಮಿಸಿ ’ ಎಂದು ಕೋರಿಕೊಂಡಿದ್ದಾಳೆ.
ಜಮ್ಮು-ಕಾಶ್ಮೀರದ ‘ಮಾರ್ಮಿಕ್ ನ್ಯೂಸ್ ’ಹೆಸರಿನ ಪೇಜ್ ಫೇಸ್ಬುಕ್ ನಲ್ಲಿ ಶೇರ್ ಮಾಡಿಕೊಂಡಿರುವ ನಾಲ್ಕೂವರೆ ನಿಮಿಷಗಳ ವೀಡಿಯೊ ಈಗಾಗಲೇ ಸುಮಾರು 20 ಲ.ವೀಕ್ಷಣೆಗಳನ್ನು ಮತ್ತು 1,16,000ಕ್ಕೂ ಅಧಿಕ ಲೈಕ್ಗಳನ್ನು ಪಡೆದುಕೊಂಡಿದೆ.
ಶಾಲೆಯಲ್ಲಿನ ಕೊರತೆಗಳನ್ನು ವೀಡಿಯೊದಲ್ಲಿ ತೋರಿಸಿರುವ ನಾಝ್,ಅದನ್ನು ಉತ್ತಮವಾಗಿಸಲು ಅಧಿಕಾರಿಗಳು ಏನು ಮಾಡಬಹುದು ಎಂಬ ಬಗ್ಗೆ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾಳೆ.