ಗ್ಯಾಂಗ್‌ಸ್ಟರ್ ಅತೀಕ್ ಪುತ್ರನನ್ನು ಜೀವಂತ ಹಿಡಿಯಲು ಪ್ರಯತ್ನಿಸಲಾಗಿತ್ತು: ಉತ್ತರಪ್ರದೇಶ ಪೊಲೀಸ್ ವರದಿ
ಲಕ್ನೋ: ಉತ್ತರ ಪ್ರದೇಶ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಆತಿಕ್ ಅಹ್ಮದ್ ಅವರ ಪುತ್ರ ಮತ್ತು ಸಹಚರನನ್ನು ಎನ್‌ಕೌಂಟರ್ ಮಾಡುವ ಮುನ್ನ ಜೀವಂತವಾಗಿ ಹಿಡಿಯಲು ಪ್ರಯತ್ನಪಟ್ಟಿದ್ದರು ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ ಎಂದು ndtv.com ವರದಿ ಮಾಡಿದೆ.
ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಆತಿಕ್ ಅಹ್ಮದ್ ಅವರ 19 ವರ್ಷದ ಮಗ ಅಸದ್ ಅಹ್ಮದ್ ಮತ್ತು ಸಹಚರ ಗುಲಾಮ್ ಎಂಬಾತ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಅವರಿಬ್ಬರು ಕೂಡಾ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು, ಇಬ್ಬರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.
ಅದಾಗ್ಯೂ, ಪ್ರತಿಪಕ್ಷವು ಎನ್‌ಕೌಂಟರ್ ಅನ್ನು ಪ್ರಾಯೋಜಿತ ಹತ್ಯೆ ಎಂದು ಬಣ್ಣಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇದೊಂದು ನಕಲಿ ಎನ್ಕೌಂಟರ್ ಎಂದು ಹೇಳಿದ್ದಾರೆ.
ಅಸಾದ್ ಮತ್ತು ಗುಲಾಮ್ ನಂಬರ್ ಪ್ಲೇಟ್‌ಗಳಿಲ್ಲದ ಎರಡು ಮೋಟಾರ್‌ಸೈಕಲ್‌ಗಳಲ್ಲಿ ಹೋಗುತ್ತಿದ್ದಾಗ ಪೊಲೀಸ್ ಅಧಿಕಾರಿಗಳು ಅಡ್ಡಗಟ್ಟಿದ್ದಾರೆ. ಅಧಿಕಾರಿಗಳು ಅವರನ್ನು ನಿಲ್ಲಿಸುವಂತೆ ಕೇಳಿದಾಗ, ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ, ಆದರೆ, ಅವರನ್ನು ಪೊಲೀಸರು ಸುತ್ತುವರಿದಿದ್ದರು ಎಂದು ಎಫ್‌ಐಆರ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ.
“ಅವರನ್ನು ಸುತ್ತುವರೆದಿದ್ದ [ವಿಶೇಷ ಕಾರ್ಯಪಡೆಯ] ಎರಡೂ ತಂಡಗಳ ಸದಸ್ಯರು, ತಮ್ಮ ಪ್ರಾಣವನ್ನು ಲೆಕ್ಕಿಸದೆ ಅವರನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಆರೋಪಿಗಳಿಂದ ಗುಂಡಿನ ದಾಳಿ ನಡೆದಾಗ ಆತ್ಮರಕ್ಷಣೆಗಾಗಿ ಪೊಲೀಸರೂ ಗುಂಡು ಹಾರಿಸಬೇಕಾಯಿತು.'' ಎಂದು ಪೊಲೀಸರು ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಗುಂಡಿನ ದಾಳಿಗೊಳಾದ ಬಳಿಕ ಜೀವಂತ ಇದ್ದ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದೇವೆ, ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.