ರಾಜಸ್ಥಾನದ ಯುವಕರ ಹತ್ಯೆ: ಇಬ್ಬರು ಶಂಕಿತ ಗೋರಕ್ಷಕರ ಬಂಧನ

Update: 2023-04-14 18:05 GMT

ಜೈಪುರ, ಎ. 14: ರಾಜಸ್ಥಾನದ ಭರತ್‌ಪುರದ ನಿವಾಸಿಗಳಾದ ಇಬ್ಬರು ಯುವಕರನ್ನು ನಕಲಿ ಗೋರಕ್ಷಕರು ಅಪಹರಿಸಿದ ಹಾಗೂ ಹತ್ಯೆಗೈದ ಪ್ರಕರಣದಲ್ಲಿ ಬೇಕಾಗಿದ್ದ 8 ಮಂದಿ ಆರೋಪಿಗಳಲ್ಲಿ ಇಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಮೋನು ರಾಣಾ ಆಲಿಯಾಸ್ ನರೇಂದ್ರ ಹಾಗೂ ಗೋಗಿ ಆಲಿಯಾಸ್ ಮೋನು ಎಂಬವರನ್ನು ಡೆಹ್ರಾಡೂನ್‌ನ ಬೆಟ್ಟ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಐಜಿಪಿ (ಭರತ್‌ಪುರ) ಗೌರವ್ ಶ್ರೀವಾತ್ಸವ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಬಜರಂಗದಳ ಅಲ್ಲದೆ ಹರ್ಯಾಣ ಗೋರಕ್ಷಕ ದಳ ಸೇರಿದಂತೆ ಇತರ ಸಂಘಟನೆಗಳೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ರಾಜಸ್ಥಾನದ ಭರತ್‌ಪುರದ ನಿವಾಸಿಗಳಾದ ನಾಸಿರ್ (25) ಹಾಗೂ ಜುನೈದ್ ಆಲಿಯಾಸ್ ಜುನು (35) ಅವರನ್ನು ಶಂಕಿತ ಗೋರಕ್ಷಕರು ಫೆಬ್ರವರಿ 15ರಂದು ಅಪಹರಿಸಿದ್ದರು. ನಾಸಿರ್ ಹಾಗೂ ಜುನೈದ್ ಅವರ ಮೃತದೇಹಗಳು ಫೆಬ್ರವರಿ 16ರಂದು ಬೆಳಗ್ಗೆ ಹರ್ಯಾಣದ ಭಿವಾನಿಯ ಲೊಹಾರುವಿನಲ್ಲಿ ಕಾರೊಂದರಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪ್ರಾಥಮಿಕ ವಿಚಾರಣೆ ವೇಳೆ ಇಬ್ಬರು ಆರೋಪಿಗಳು ಗೋ ಕಳ್ಳ ಸಾಗಾಟದ ಶಂಕೆಯಲ್ಲಿ ಜುನೈದ್ ಹಾಗೂ ನಾಸಿರ್‌ನನ್ನು ಅಪಹರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

Similar News