ಪುರಾವೆ ಇಲ್ಲದೆ ನಾನು ಪ್ರಧಾನಿಗೆ 1,000 ಕೋಟಿ ರೂ. ನೀಡಿದ್ದೇನೆ ಎಂದರೆ ಪ್ರಧಾನಿಯನ್ನು ಬಂಧಿಸುತ್ತೀರಾ?: ಕೇಜ್ರಿವಾಲ್

Update: 2023-04-15 10:32 GMT

ಹೊಸದಿಲ್ಲಿ: ನ್ಯಾಯಾಲಯಗಳಿಗೆ ಸುಳ್ಳು ಹೇಳಲಾಗುತ್ತಿದೆ, ಬಂಧಿತರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಹಾಗೂ  ಯಾವುದೇ ತಪ್ಪಿಗೆ ಯಾವುದೇ ಪುರಾವೆ ಇಲ್ಲ ಎಂದು ರಾಜಧಾನಿಯ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಸಮನ್ಸ್ ಪಡೆದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ಶನಿವಾರ ಹೇಳಿದ್ದಾರೆ.

"ದಾಳಿಯಲ್ಲಿ ಅವರಿಗೆ ಏನೂ ಸಿಗದಿದ್ದಾಗ, ನಾವು ಗೋವಾ ಚುನಾವಣಾ ಪ್ರಚಾರಕ್ಕೆ ಹಣವನ್ನು ವ್ಯಯಿಸಿದ್ದೇವೆ ಎಂದು ಅವರು ಹೇಳಿದರು. ಇದಕ್ಕೆ ಪುರಾವೆ ಎಲ್ಲಿದೆ? ನಮ್ಮ ಎಲ್ಲಾ ಪಾವತಿಗಳನ್ನು ಚೆಕ್‌ಗಳ ಮೂಲಕ ಮಾಡಲಾಗಿದೆ. ನಮಗೆ ಸಿಕ್ಕಿದೆ ಎಂದು ಹೇಳುತ್ತಿರುವ  100 ಕೋಟಿ ರೂ. ನಲ್ಲಿ ಒಂದು ರೂಪಾಯಿಯನ್ನು ನನಗೆ ತೋರಿಸಿ.  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆ.17ರಂದು ಸಂಜೆ 7 ಗಂಟೆಗೆ 1,000 ಕೋಟಿ ರೂ. ಪಾವತಿಸಿದ್ದೇನೆ ಎಂದು ಪುರಾವೆ ಇಲ್ಲದೇ ನಾನು ಹೇಳಿದರೆ ಅವರನ್ನು ನೀವು ಬಂಧಿಸುತ್ತೀರಾ? ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ  ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ  ಜಾರಿ ನಿರ್ದೇಶನಾಲಯ (ಈಡಿ) ದಂತಹ ಸಂಸ್ಥೆಗಳು ತಮ್ಮ ಉಗ್ರ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಅಸಾಧಾರಣ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಆರೋಪಿಸಿದರು.

14 ಫೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ಏಜೆನ್ಸಿಗಳು ಸುಳ್ಳು ಹೇಳಿಕೆ ನೀಡಿವೆ, ಪ್ರಮಾಣವಚನ ಅಫಿಡವಿಟ್‌ಗಳಲ್ಲಿ ನ್ಯಾಯಾಲಯಕ್ಕೆ ಸುಳ್ಳು ಹೇಳುತ್ತಿವೆ, ಸುಳ್ಳು ತಪ್ಪೊಪ್ಪಿಗೆಗಳನ್ನು ಪಡೆಯಲು ಶಂಕಿತರನ್ನು ಹಿಂಸಿಸುತ್ತಿವೆ ಹಾಗೂ  “ನಿಮ್ಮ ಮಗಳು ನಾಳೆ ಕಾಲೇಜಿಗೆ ಹೇಗೆ ಬರುತ್ತಾಳೆ ಎಂಬುದನ್ನು ನೋಡುತ್ತೇನೆ” ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಕೇಜ್ರಿವಾಲ್  ಹೇಳಿದರು.

ಹಲವು ತಿಂಗಳಿನಿಂದ  ತನಿಖೆ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರ  ಬಂಧನಗಳ ಹೊರತಾಗಿಯೂ ಏಜೆನ್ಸಿಗಳಿಗೆ ಮದ್ಯದ ಹಗರಣದ ಮೂಲಕ ಸಂಗ್ರಹಿಸಲಾಗಿದೆ ಎಂದು ಹೇಳಿಕೊಳ್ಳುವ ಅಕ್ರಮ ಸಂಪತ್ತಿನ ಒಂದು ಪೈಸೆಯೂ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

Similar News