×
Ad

ಅಮೂಲ್‌ನೊಂದಿಗೆ ನಂದಿನಿಯ ವಿಲೀನಕ್ಕೆ ಅವಕಾಶ ನೀಡುವುದಿಲ್ಲ: ಯುಟಿ ಖಾದರ್

Update: 2023-04-15 15:23 IST

ಮಂಗಳೂರು, ಎ.15: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದ ಹಾಲಿನ ಬ್ರಾಂಡ್ ನಂದಿನಿಯನ್ನು ಗುಜರಾತ್ ಮೂಲದ ಅಮೂಲ್ ಜೊತೆ ವಿಲೀನ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಎಫ್ ಪ್ರಾಬಲ್ಯವನ್ನು ಕರ್ನಾಟಕದಲ್ಲಿ ಕುಗ್ಗಿಸಲು ಅಮುಲ್‌ಗೆ ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದರು.

ನಂದಿನಿಯನ್ನು ಅಮೂಲ್‌ನೊಂದಿಗೆ ವಿಲೀನಗೊಳಿಸುವ ವಿಚಾರದಲ್ಲಿ ರೈತರು ಎಚ್ಚರ ವಹಿಸಬೇಕು. ಇದು ರೈತರ ಹಿತಕ್ಕೆ ಧಕ್ಕೆಯನ್ನುಂಟು ಮಾಡಲಿದೆ. ದೇಶದ ಸಮಗ್ರ ಸಂಪತ್ತು ಗುಜರಾತ್‌ನವರ ಕೈಗೆ ಹೋಗುತ್ತಾ ಇದೆ. ನಷ್ಟದಲ್ಲಿರುವ ಬರೋಡಾ ಬ್ಯಾಂಕ್ ಜೊತೆ ಲಾಭದಲ್ಲಿರುವ ವಿಜಯ ಬ್ಯಾಂಕ್‌ನ್ನು ವಿಲೀನ ಮಾಡಲಾಯಿತು. ಅದೇ ರೀತಿ ಜಿಯೊ ಸಂಸ್ಥೆಯ ಏಳಿಗೆಗಾಗಿ ಬಿಎಸ್‌ಎನ್‌ಎಲ್‌ನ ಕತ್ತು ಹಿಚುಕಲಾಗಿದೆ. ಬಿಎಸ್‌ಎನ್‌ಎಲ್‌ನ ಸಿಬ್ಬಂದಿಗೆ ಸಂಬಳ ಇಲ್ಲ, ಹೊಸ ನೌಕರರ ನೇಮಕಾತಿ ಇಲ್ಲ. ಮರಕ್ಕೆ ಇಂಗು ಇಟ್ಟು ಕೊಲ್ಲುವ ರೀತಿಯಲ್ಲಿ ಬಿಜೆಪಿ ಸರಕಾರ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಗಳ ಹಿತಕ್ಕಾಗಿ ಬಲಿಕೊಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಸರಕಾರದಿಂದ ರಾಜ್ಯದಲ್ಲಿ ಹೈನುಗಾರಿಕೆಯ ಅಭಿವೃದ್ಧಿಗೆ ಯಾವುದೇ ಯೋಜನೆ ಇಲ್ಲ. ಹೈನುಗಾರಿಕೆ ಇಲಾಖೆಗೆ ಉತ್ತೇಜನ ನೀಡಬೇಕಾದ ಪಶುಸಂಗೋಪನಾ ಇಲಾಖೆಯಲ್ಲಿ ವೈದ್ಯರೇ ಇಲ್ಲ. ಇಲಾಖೆಗೆ ಆ್ಯಂಬುಲೆನ್ಸ್ ನೀಡಲಾಗಿದೆ. ಆದರೆ ಅದರ ನಿರ್ವಹಣೆಗೆ ಚಾಲಕ ಸಿಬ್ಬಂದಿ ಇಲ್ಲ, ಮೂಕ ಪ್ರಾಣಿಗಳಿಗಾಗಿ ಇರುವ ಪಶು ಆಸ್ಪತ್ರೆಗಳ ಬಗ್ಗೆ ಸರಕಾರಕ್ಕೆ ಯಾಕೆ ನಿರ್ಲಕ್ಷ್ಯ ಎಂದು ಪ್ರಶ್ನಿಸಿದರು.

ಜೋಶಿ ಕೈವಾಡ: ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಸಮರ್ಥರಾಗಿರುವ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈವಾಡ ಇದೆ. ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಅಡ್ಡಿಯಾಗಿರುವ ನಾಯಕರಿಗೆ ಟಿಕೆಟ್ ನಿರಾಕರಿಸಿ ಅವರ ರಾಜಕೀಯ ಭವಿಷ್ಯವನ್ನು ಮುಗಿಸುವ ಯತ್ನ ನಡೆದಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ ಮತ್ತು ಹರೀಶ್ ಕುಮಾರ್, ಪಕ್ಷದ ಧುರೀಣರಾದ ನವೀನ್ ಡಿಸೋಜ, ಸದಾಶಿವ ಉಳ್ಳಾಲ, ಶಬೀರ್ ಮತ್ತಿತರರು ಉಪಸ್ಥಿತರಿದ್ದರು.

Similar News