ಕಾನೂನು ನೋಟಿಸ್ ನೀಡಿದ RSS ನಾಯಕ ರಾಮ್ ಮಾಧವ್‌ಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ: ಸತ್ಯಪಾಲ್ ಮಲಿಕ್
ಹೊಸದಿಲ್ಲಿ: ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿ ಹಾಗೂ ಕ್ಷಮೆಯಾಚಿಸಬೇಕೆಂದು ಸೂಚಿಸಿ ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ಅವರು ಕಳುಹಿಸಿದ ಕಾನೂನು ನೋಟಿಸ್ ಕುರಿತು theprint.in ಮಾಧ್ಯಮ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್, ತಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸತ್ಯಪಾಲ್ ಮಲಿಕ್ ಅವರು ಎಪ್ರಿಲ್ 8, 2023 ರಲ್ಲಿ ಯುಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, "ರಾಜಕೀಯ ವಲಯದಲ್ಲಿ ಉಳಿದುಕೊಳ್ಳುವ ದೃಷ್ಟಿಯಿಂದ ಅಸತ್ಯ ಮತ್ತು ಮಾನಹಾನಿಕರ ಹೇಳಿಕೆಗಳನ್ನು" ನೀಡಿದ್ದಾರೆಂದು ಗುರುವಾರ ರಾಮ್ ಮಾಧವ್ ಅವರು ಕಳುಹಿಸಿದ ಕಾನೂನು ನೋಟಿಸಿನಲ್ಲಿ ಹೇಳಲಾಗಿದೆ.
ತಾವು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ವೇಳೆ ಎರಡು ಯೋಜನೆಗಳಿಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿಗೊಳಿಸಲು ರೂ. 300 ಕೋಟಿ ಲಂಚದ ಕುರಿತು ಆರೆಸ್ಸೆಸ್ ನಾಯಕ ತಮ್ಮನ್ನು ಭೇಟಿಯಾಗಿ ಹೇಳಿದ್ದರೆಂದು ತಾವು 2021 ರಲ್ಲಿ ನೀಡಿದ್ದ ಹೇಳಿಕೆಯನ್ನು ಸಂದರ್ಶನದಲ್ಲಿ ಮಲಿಕ್ ಪುನರುಚ್ಛರಿಸಿದ್ದರು.
ಇದಕ್ಕೆ ಆಕ್ಷೇಪಿಸಿ ಸಲ್ಲಿಸಲಾಗಿದ್ದ ಕಾನೂನು ನೋಟಿಸಿನಲ್ಲಿ, 48 ಗಂಟೆಗಳೊಳಗೆ ಬಹಿರಂಗ ಕ್ಷಮೆಯಾಚಿಸಬೇಕೆಂದು ಅವರಿಗೆ ಸೂಚಿಸಲಾಗಿತ್ತು.
ಆದರೆ ಕ್ಷಮೆಯಾಚಿಸುವ ಪ್ರಶ್ನೆಯಿಲ್ಲ, ಬದಲು ಲಿಖಿತ ಉತ್ತರ ಸಲ್ಲಿಸುವುದಾಗಿ ಮಲಿಕ್ ತಿಳಿಸಿದರಲ್ಲದೆ ಈ ನೋಟಿಸ್ ಕಳುಹಿಸಲು ಯಾರಾದರೂ ರಾಮ್ ಮಾಧವ್ ಅವರ ಮೇಲೆ ಒತ್ತಡ ಹೇರಿರಬಹುದು ಎಂದರು.
"ನಾನು ಜಮ್ಮು ಕಾಶ್ಮೀರ ರಾಜ್ಯಪಾಲನಾಗಿದ್ದ ವೇಳೆ 2021 ರಲ್ಲಿ ಆರೆಸ್ಸೆಸ್ ಪದಾಧಕಾರಿ ನನಗೆ ಲಂಚದ ಆಮಿಷವೊಡ್ಡಿದ್ದರು ಎಂದು ಹಿಂದೆ ಹೇಳಿದ್ದೆ. ಹೊಸತೇನೂ ಹೇಳಿಲ್ಲ," ಎಂದು ಮಲಿಕ್ ಹೇಳಿದ್ದಾರೆ.
ರಾಮ್ ಮಾಧವ್ ಅವರ ವಕೀಲರು ಪ್ರತಿಕ್ರಿಯಿಸಿ ಮಲಿಕ್ ಅವರು 2021 ರಲ್ಲಿ ಆರೆಸ್ಸೆಸ್ ಪದಾಧಿಕಾರಿ ಎಂದಿದ್ದರೆ ಈ ಬಾರಿ ಸಂದರ್ಶನದಲ್ಲಿ ಹೆಸರನ್ನು ಹೇಳಿದ್ದಾರೆ, ಅದಕ್ಕೆ ಕಾನೂನು ನೋಟಿಸ್ ಕಳುಹಿಸಲಾಗಿದೆ ಎಂದರು.