ಪತ್ರಕರ್ತರ ಸೋಗಿನಲ್ಲಿ ಅತೀಕ್ ಅಹ್ಮದ್ ನನ್ನು ಕೊಂದಿರುವ ಹಂತಕರು ಹಲವು ಪ್ರಕರಣಗಳಲ್ಲಿ ಭಾಗಿ: ಪೊಲೀಸರು
ತಮಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದ ಮೂವರು ಕ್ರಿಮಿನಲ್ ಗಳ ಕುಟುಂಬ
ಲಕ್ನೊ: ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಶನಿವಾರ ರಾತ್ರಿ ತಮ್ಮ ಕಸ್ಟಡಿಯಲ್ಲಿದ್ದಾಗಲೇ ದೃಶ್ಯಮಾಧ್ಯಮದ ಕ್ಯಾಮರಾದ ಮುಂದೆಯೇ ಹತ್ಯೆಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಭಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅವರು ಘಟನೆಯ ಬಗ್ಗೆ ಇದುವರೆಗೆ ಬಾಯಿ ಬಿಟ್ಟಿಲ್ಲ. ಮೂವರು ಶೂಟರ್‌ಗಳನ್ನು ಸ್ಥಳದಲ್ಲೇ ಸೆರೆ ಹಿಡಿದಿರುವ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಕ್ರಿಮಿನಲ್ ಗಳ ಅವರ ಹಿನ್ನೆಲೆ ಹಾಗೂ ಅಪರಾಧದ ಪೂರ್ವಾಪರವನ್ನು ತನಿಖೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂವರು ಹಂತಕರನ್ನು ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಹಾಗೂ ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಿದ್ದು, ದಾಳಿಕೋರರು ಪತ್ರಕರ್ತರಂತೆ ಪೋಸ್ ನೀಡಿದ್ದರು. ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಪ್ರಯಾಗ್‌ರಾಜ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗಲೇ ಗುಂಡು ಹಾರಿಸಿದ್ದಾರೆ. ಮೂವರೂ ಹಂತಕರು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂವರು ಕ್ರಿಮಿನಲ್ ಗಳ ಕುಟುಂಬಗಳು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಲವ್ಲೇಶ್ ತಿವಾರಿ ಈ ಹಿಂದೆಯೂ ಜೈಲು ಪಾಲಾಗಿದ್ದ. ಕುಟುಂಬಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ ಲವ್ಲೇಶ್ ತಂದೆ ಹೇಳಿದರು.
"ಅವನು ನನ್ನ ಮಗ, ನಾವು ಟಿವಿಯಲ್ಲಿ ಘಟನೆಯನ್ನು ನೋಡಿದ್ದೇವೆ, ನಮಗೆ ಲವ್ಲೇಶ್ ಕೃತ್ಯಗಳ ಬಗ್ಗೆ ತಿಳಿದಿಲ್ಲ, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಅವನು ಇಲ್ಲಿ ವಾಸಿಸುತ್ತಿರಲಿಲ್ಲ ಮತ್ತು ಅವನು ನಮ್ಮ ಕುಟುಂಬ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ. ಆತ ನಮ್ಮ ಬಳಿ ಏನೂ ಹೇಳುತ್ತಿರಲಿಲ್ಲ. ಐದಾರು ದಿನಗಳ ಹಿಂದೆ ಆತ ಇಲ್ಲಿಗೆ ಬಂದಿದ್ದ. ನಾವು ಆತನೊಂದಿಗೆ ಹಲವು ವರ್ಷಗಳಿಂದ ಮಾತನಾಡುತ್ತಿಲ್ಲ. ಈಗಾಗಲೇ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ಆತ ಏನೂ ಕೆಲಸ ಮಾಡುತ್ತಿರಲಿಲ್ಲ. ಆತ ಮಾದಕ ವ್ಯಸನಿಯಾಗಿದ್ದ" ಎಂದು ಯಜ್ಞಾ ತಿವಾರಿ ಹೇಳಿದ್ದಾರೆ.
ಸನ್ನಿ ವಿರುದ್ಧ 14 ಪ್ರಕರಣಗಳು ದಾಖಲಾಗಿದ್ದು, ಹಿಸ್ಟರಿ ಶೀಟರ್ ಎಂದು ಘೋಷಿಸಿದಾಗಿನಿಂದ ಪರಾರಿಯಾಗಿದ್ದಾನೆ. ಆತನ ತಂದೆ ತೀರಿಕೊಂಡಿದ್ದು, ತಮ್ಮ ಪೂರ್ವಜರ ಆಸ್ತಿಯ ಪಾಲನ್ನು ಮಾರಾಟ ಮಾಡಿದ ನಂತರ ಮನೆ ತೊರೆದಿದ್ದಾನೆ. ಐದು ವರ್ಷಗಳಿಂದ ಸನ್ನಿ ತನ್ನ ಕುಟುಂಬ, ತಾಯಿ ಮತ್ತು ಸಹೋದರನನ್ನು ಭೇಟಿ ಮಾಡಿಲ್ಲ ಎಂದು ಶೂಟರ್ ಸನ್ನಿ ಸಿಂಗ್ ಅವರ ಸಹೋದರ ಪಿಂಟು ಸಿಂಗ್ ಹೇಳಿದ್ದಾರೆ.
ಮೂರನೇ ಶೂಟರ್ ಅರುಣ್ ಬಾಲ್ಯದಲ್ಲಿ ಮನೆ ಬಿಟ್ಟು ಹೋಗಿದ್ದ. 2010ರಲ್ಲಿ ರೈಲಿನಲ್ಲಿ ಪೊಲೀಸರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಹೆಸರು ಕಾಣಿಸಿಕೊಂಡಿದೆ. ಈತ ದಿಲ್ಲಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.