ಬಿಹಾರದಲ್ಲಿ ಕಳ್ಳಭಟ್ಟಿ ದುರಂತ: 14 ಮಂದಿ ಮೃತ್ಯು
ಪಾಟ್ನಾ: ಪೂರ್ವ ಬಿಹಾರದ ಚಂಪಾರಣ್‌ನಲ್ಲಿ ವಿಷಪೂರಿತ ಮದ್ಯ ಸೇವಿಸಿ ಕನಿಷ್ಠ 14 ಮಂದಿ ಮೃತಪಟ್ಟು, ಹಲವು ಮಂದಿ ಅಸ್ವಸ್ಥರಾಗಿದ್ದಾರೆ. ಸಂಪೂರ್ಣ ಪಾನನಿಷೇಧ ಇರುವ ಬಿಹಾರದಲ್ಲಿ ಕಳೆದ ವರ್ಷದ ಜನವರಿಯಿಂದೀಚೆಗೆ ಸರಣಿ ಕಳ್ಳಭಟ್ಟಿ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 160ನ್ನು ಮೀರಿದೆ. ನಿಗೂಢ ಪರಿಸ್ಥಿತಿಗಳಲ್ಲಿ ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದು, ಪೊಲೀಸರು ಈ ಸಂಬಂಧ 10 ಮಂದಿಯನ್ನು ಬಂಧಿಸಿದ್ದಾರೆ.
ಗ್ರಾಮವೊಂದಕ್ಕೆ ಪೊಟ್ಟಣಗಳಲ್ಲಿ ಮದ್ಯ ಕಳ್ಳಸಾಗಾಣೆ ಮಾಡುತ್ತಿದ್ದ ಆರೋಪದಲ್ಲಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆಲ್ಕೋಹಾಲ್ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೌರಭ್ ಜೋರ್ವಾಲ್ ವಿವರಿಸಿದ್ದಾರೆ.
ತುರ್ಕೌಲಿಯಾ, ಹರ್ಸಿದ್ದಿ, ಸುಗೌಲಿ ಮತ್ತು ಪಹರ್‌ಪುರ ತಾಲೂಕುಗಳಲ್ಲಿ 14 ಮಂದಿ ನಿಗೂಢ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಕುಟುಂಬ ಸದಸ್ಯರು 11 ಮೃತದೇಹಗಳನ್ನು ತರಾತುರಿಯಲ್ಲಿ ಅಂತ್ಯಸಂಸ್ಕಾರ ನಡೆಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತಪಟ್ಟ ಮೂರು ಮಂದಿಯ ಮರಣೋತ್ತರ ಪರಿಕ್ಷೆ ಶನಿವಾರ ಬೆಳಿಗ್ಗೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹಲವು ಆಸ್ಪತ್ರೆಗಳಲ್ಲಿ ಅಸ್ವಸ್ಥರು ದಾಖಲಾಗಿದ್ದಾರೆ.