ಅತೀಕ್ ಅಹ್ಮದ್ ಹತ್ಯೆ ಪ್ರಕರಣ: ಉತ್ತರಪ್ರದೇಶ ಸರಕಾರದ ಕಾರ್ಯವೈಖರಿ ಪ್ರಶ್ನಿಸಿದ ಮಾಯಾವತಿ
ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ದರೋಡೆಕೋರ-ರಾಜಕಾರಣಿ ಅತಿಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಹತ್ಯೆ ಮಾಡಿರುವುದು ಉತ್ತರ ಪ್ರದೇಶ ಸರಕಾರದ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ( BSP chief Mayawati ) ರವಿವಾರ ಹೇಳಿದ್ದಾರೆ.
ದೇಶದಾದ್ಯಂತ ಚರ್ಚೆಯಾಗುತ್ತಿರುವ ಈ "ಅತ್ಯಂತ ಗಂಭೀರ ಹಾಗೂ ಚಿಂತಾಜನಕ" ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸಿದರೆ ಉತ್ತಮ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಯಾವತಿ, "ಈಗ ಉತ್ತರ ಪ್ರದೇಶದಲ್ಲಿ 'ಕಾನೂನಿನ ಆಳ್ವಿಕೆ' ಬದಲಿಗೆ, ಅದು 'ಎನ್‌ಕೌಂಟರ್ ಪ್ರದೇಶ' ಆಗುವುದು ಎಷ್ಟು ಸೂಕ್ತ? ಇದು ಯೋಚಿಸಬೇಕಾದ ಸಂಗತಿ" ಎಂದು ಹೇಳಿದ್ದಾರೆ.
ಗುಜರಾತ್ ಜೈಲಿನಿಂದ ಕರೆತರಲಾದ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅವರನ್ನು ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ಬರೇಲಿ ಜೈಲಿನಿಂದ ಕರೆತಂದು ಪೊಲೀಸ್ ಕಸ್ಟಡಿಯಲ್ಲಿ ಹತ್ಯೆ ಮಾಡಿರುವುದು ಉಮೇಶ್ ಪಾಲ್ ಕೊಲೆ ಪ್ರಕರಣದಂತೆಯೇ ಹೇಯ ಕೃತ್ಯ. ಇದು ಉತ್ತರಪ್ರದೇಶ ಸರಕಾರದ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅದರ ಕಾರ್ಯಶೈಲಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ” ಎಂದು ಮಾಯಾವತಿ ಹೇಳಿದರು.
2005ರಲ್ಲಿ ಬಿಜೆಪಿ ಮುಖಂಡ ಉಮೇಶ್ ಪಾಲ್ ನನ್ನು ಅತೀಕ್ ಗ್ಯಾಂಗ್ ನವರು ಹತ್ಯೆ ಮಾಡಿದ್ದರು.