ಅತೀಕ್ ಅಹ್ಮದ್ ಹಾಗೂ ಅಶ್ರಫ್ ಹತ್ಯೆ ಆದಿತ್ಯನಾಥ್‌ರ ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ನಿದರ್ಶನ: ಉವೈಸಿ ವಾಗ್ದಾಳಿ
ಲಕ್ನೊ: ಶನಿವಾರ ಭೂಗತ ಪಾತಕಿಗಳಾದ ಅತೀಕ್ ಅಹಮದ್ ಹಾಗೂ ಆತನ ಸಹೋದರ ಅಶ್ರಫ್ ಅಹಮದ್ ಮೇಲೆ ಹಂತಕರು ಗುಂಡು ಹಾರಿಸಿ ಹತ್ಯೆಗೈದಿರುವುದನ್ನು ತೀವ್ರವಾಗಿ ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ, ಈ ಹತ್ಯೆಯು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಜ್ವಲಂತ ನಿದರ್ಶನ ಎಂದು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಉವೈಸಿ, "ಅತೀಕ್ ಹಾಗೂ ಆತನ ಸಹೋದರ ಪೊಲೀಸ್ ವಶದಲ್ಲಿದ್ದಾಗ ಮತ್ತು ಕೈಗೆ ಬೇಡಿ ತೊಡಿಸಿದ್ದಾಗ ಹತ್ಯೆಗೀಡಾಗಿದ್ದಾರೆ. ಈ ಸಂದರ್ಭದಲ್ಲಿ 'ಜೈ ಶ್ರೀರಾಮ್' ಎಂಬ ಘೋಷಣೆಗಳೂ ಕೇಳಿ ಬಂದಿವೆ. ಆದಿತ್ಯನಾಥರ ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಈ ಹತ್ಯೆ ಜ್ವಲಂತ ನಿದರ್ಶನ. ಯಾರು ಎನ್‌ಕೌಂಟರ್ ರಾಜ್ಯವನ್ನು ಸಂಭ್ರಮಿಸುತ್ತಿದ್ದಾರೊ ಅವರೂ ಕೂಡಾ ಈ ಹತ್ಯೆಗೆ ಸಮಾನ ಹೊಣೆಗಾರರು" ಎಂದು ಹೇಳಿದ್ದಾರೆ.
ನಾಟಕೀಯ ಬೆಳವಣಿಗೆಯೊಂದರಲ್ಲಿ ರಾಜಕಾರಣಿಯಾಗಿ ಬದಲಾಗಿರುವ ಭೂಗತ ಪಾತಕಿ ಅತೀಕ್ ಹಾಗೂ ಆತನ ಸಹೋದರ ಅಶ್ರಫ್‌ನನ್ನು ಅಪರಿಚಿತ ಹಂತಕರು ಶನಿವಾರ ರಾತ್ರಿ ಗುಂಡು ಹಾರಿಸಿ ಹತ್ಯೆಗೈದಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಅವರಿಬ್ಬರನ್ನು ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ವೈದ್ಯಕೀಯ ಕಾಲೇಜೊಂದಕ್ಕೆ ಕರೆದುಕೊಂಡು ತೆರಳುತ್ತಿದ್ದರು.
ಇದರ ಬೆನ್ನಿಗೇ ಪೊಲೀಸರು ಹತ್ಯೆ ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ಲವ್ಲೇಶ್, ಅರುಣ್ ಹಾಗೂ ಸನ್ನಿ ಎಂದು ಗುರುತಿಸಲಾಗಿದೆ. ಆರೋಪಿಗಳು ಪತ್ರಕರ್ತರ ಸೋಗಿನಲ್ಲಿ ಬಂದು ಅತೀಕ್ ಹಾಗೂ ಅಶ್ರಫ್ ಹತ್ಯೆಗೈದಿದ್ದರು. ಘಟನೆಯ ನಂತರ ಲಕ್ನೊದಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ.