×
Ad

ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ರೂ. 90 ಲಕ್ಷ ಕಳೆದುಕೊಂಡ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಆತ್ಮಹತ್ಯೆ ಶಂಕೆ

Update: 2023-04-16 16:53 IST

ಕೊಯಂಬತ್ತೂರು: ಆತ್ಮಹತ್ಯೆ ಎಂದು ಶಂಕಿಸಲಾಗಿರುವ ಘಟನೆಯಲ್ಲಿ ತಮಿಳುನಾಡಿನ ಕೊಯಂಬತ್ತೂರಿನ ಹೋಟೆಲೊಂದರಲ್ಲಿ 35 ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದ್ದಾರೆ.

ಮೃತ ವ್ಯಕ್ತಿಯನ್ನು ಪೊಲ್ಲಾಚಿಯ ಸಪ್ಪಟ್ಟಿ ಕಿಳವನ್ ಪುದೂರ್ ಗ್ರಾಮದ ಸಬಾನಾಯಗನ್ ಎಂದು ಗುರುತಿಸಲಾಗಿದ್ದು, ಅವರು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ರೂ. 90 ಲಕ್ಷ ಕಳೆದುಕೊಂಡಿದ್ದರಿಂದ ಆತ್ಮಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ.

ತಮಿಳುನಾಡು ಸರ್ಕಾರದ ತಮಿಳುನಾಡು ಆನ್‌ಲೈನ್ ಜೂಜು ನಿಷೇಧ ಹಾಗೂ ಆನ್‌ಲೈನ್ ಕ್ರೀಡೆಗಳ ನಿರ್ಬಂಧ ಕಾಯ್ದೆಗೆ ರಾಜ್ಯಪಾಲ ಆರ್.ಎನ್.ರವಿ ಎಪ್ರಿಲ್ 7ರಂದು ಅಂಕಿತ ಹಾಕಿದ್ದು, ಈ ಕಾಯ್ದೆಯ ಅಧಿಸೂಚನೆ ಹೊರಡಿಸಲು ತಮಿಳುನಾಡು ಸರ್ಕಾರ ಸಿದ್ಧತೆ ನಡೆಸುತ್ತಿರುವಾಗಲೇ ಸಬಾನಾಯಗನ್ ಮೃತಪಟ್ಟ ಘಟನೆ ನಡೆದಿದೆ ಎಂದು thenewsminute.com ವರದಿ ಮಾಡಿದೆ.

ಎಪ್ರಿಲ್ 14ರಂದು ಬೆಳಗ್ಗೆ ಸಬಾನಾಯಗನ್ ಗಾಂಧಿಪುರಂ ಹೋಟೆಲೊಂದರಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದು, ಶನಿವಾರ ಕೊಠಡಿಯನ್ನು ತೆರವುಗೊಳಿಸಬೇಕಿತ್ತು. ಈ ಕುರಿತು ಆತನಿಗೆ ನೆನಪಿಸಲು ಹೋಟೆಲ್ ಸಿಬ್ಬಂದಿ ಕರೆ ಮಾಡಿದಾಗ ಸಬಾನಾಯಗನ್  ಫೋನ್ ಸ್ವಿಚ್ಡ್ ಆಫ್ ಆಗಿರುವುದು ಕಂಡು ಬಂದಿದೆ. ನಂತರ ಹೋಟೆಲ್ ಸಿಬ್ಬಂದಿಗಳು ಕೊಠಡಿ ಬಳಿ ತೆರಳಿ ಹಲವಾರು ಬಾರಿ ಬಾಗಿಲು ತಟ್ಟಿದಾಗಲೂ ಸಬಾನಾಯಗನ್ನಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಮತ್ತೊಂದು ಬೀಗದ ಕೈ ಬಳಸಿ ಕೊಠಡಿಯ ಬಾಗಿಲನ್ನು ತೆರೆದಿದ್ದಾರೆ. ಆಗ ಅವರು ಕೊಠಡಿಯಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ.

ಈ ಸಂಬಂಧ ರತಿನಾಪುರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ.

Similar News