ಐಪಿಎಲ್: ರಾಜಸ್ಥಾನ ಗೆಲುವಿಗೆ 178 ರನ್ ಗುರಿ ನೀಡಿದ ಗುಜರಾತ್ ಟೈಟಾನ್ಸ್
ಅಹಮದಾಬಾದ್, ಎ.16: ಡೇವಿಡ್ ಮಿಲ್ಲರ್ (46 ರನ್, 30 ಎಸೆತ), ಶುಭಮನ್ ಗಿಲ್ (45 ರನ್, 34 ಎಸೆತ)ಸಂಘಟಿತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್‌ನ 23ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿಗೆ 178 ರನ್ ಗುರಿ ನೀಡಿದೆ.
ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 177 ರನ್ ಗಳಿಸಿದೆ.
ಆರಂಭಿಕ ಬ್ಯಾಟರ್ ವೃದ್ದಿಮಾನ್ ಸಹಾ(4 ರನ್)ವಿಕೆಟನ್ನು ಬೇಗನೆ ಕಳೆದುಕೊಂಡ ಗುಜರಾತ್ ಕಳಪೆ ಆರಂಭ ಪಡೆದಿತ್ತು. 3ನೇ ವಿಕೆಟಿಗೆ 59 ರನ್ ಜೊತೆಯಾಟ ನಡೆಸಿದ ನಾಯಕ ಹಾರ್ದಿಕ್ ಪಾಂಡ್ಯ(28 ರನ್, 19 ಎಸೆತ) ಹಾಗೂ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ತಂಡವನ್ನು ಆಧರಿಸಿದರು.
ಡೇವಿಡ್ ಮಿಲ್ಲರ್ ಹಾಗೂ ಅಭಿನವ್ ಮನೋಹರ್(27 ರನ್)5ನೇ ವಿಕೆಟಿಗೆ 45 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಮಿಲ್ಲರ್(46 ರನ್, 30 ಎಸೆತ, 3 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಗಿಲ್(45 ರನ್, 34 ಎಸೆತ, 4 ಬೌಂಡರಿ, 1 ಸಿಕ್ಸರ್)ಕೇವಲ 5 ರನ್‌ನಿಂದ ಅರ್ಧಶತಕ ವಂಚಿತರಾಗಿ ಸಂದೀಪ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.
ರಾಜಸ್ಥಾನದ ಪರ ಸಂದೀಪ್ ಶರ್ಮಾ (2-25)ಯಶಸ್ವಿ ಬೌಲರ್ ಎನಿಸಿಕೊಂಡರು.