ಗುಜರಾತ್: ಒಳಚರಂಡಿಗೆ ಇಳಿದ ಕಾರ್ಮಿಕ ಸಾವು; ತಿಂಗಳ ಅಂತರದಲ್ಲಿ ಎಂಟನೇ ಸಾವು!
ಅಹ್ಮದಾಬಾದ್: ಒಳಚರಂಡಿಗೆ ಇಳಿದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಅಹ್ಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದೆ. ಇದರೊಂದಿಗೆ ಗುಜರಾತ್‌ನಲ್ಲಿ ಒಳಚರಂಡಿ ಸ್ವಚ್ಛಗೊಳಿಸುತ್ತಿರುವ ಸಂದರ್ಭ ಮೃತಪಟ್ಟವರ ಸಂಖ್ಯೆ ಕಳೆದ ಒಂದು ತಿಂಗಳಲ್ಲಿ 8 ಕ್ಕೆ ತಲುಪಿದೆ. ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭ ಮೃತಪಟ್ಟ ಕಾರ್ಮಿಕನನ್ನು ರಘು ಸೋಲಂಕಿ ಎಂದು ಗುರುತಿಸಲಾಗಿದೆ.
ಘಟನೆ ಕುರಿತಂತೆ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದರು.ಈ ಹಿನ್ನೆಲೆಯಲ್ಲಿ ಸೋಲಂಕಿ ಕುಟುಂಬ ಶುಕ್ರವಾರ ಸೂಕ್ತ ಪರಿಹಾರ ನೀಡದ ವರೆಗೆ ಹಾಗೂ ನ್ಯಾಯ ದೊರಕದ ವರೆಗೆ ಮೃತದೇಹವನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ತರುವಾಯ ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಘುವನ್ನು ಒಳಚರಂಡಿ ಸ್ವಚ್ಛಗೊಳಿಸಲು ಕರೆದ ವಿವಾಹ ಸಭಾಂಗಣದ ಮ್ಯಾನೇಜರ್ ಶ್ರೀರಾಮ್ ವಿರುದ್ಧ ರಘು ಸೋಲಂಕಿ ಅವರ ಪತ್ನಿ ದೇವು ಬೆನ್ ಎಫ್‌ಐಆರ್ ದಾಖಲಿಸಿದ್ದಾರೆ. ಶ್ರೀರಾಮ್ ಅವರು ಸುರಕ್ಷಾ ಸಾಧನಗಳನ್ನು ನೀಡದೆ ಅವರನ್ನು ಒಳಚರಂಡಿಗೆ ಇಳಿಸಿದ್ದಾರೆ. ಇದರಿಂದ ಅವರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ದೇವು ಬೆನ್ ಆರೋಪಿಸಿದ್ದಾರೆ.