×
Ad

ಸಲಿಂಗ ವಿವಾಹಗಳಿಗೆ ಮಾನ್ಯತೆ ಕೋರಿ ಅರ್ಜಿ: ವಿಚಾರಣೆಗೆ ಸಂವಿಧಾನ ಪೀಠ ರಚಿಸಿದ ಸುಪ್ರೀಂ ಕೋರ್ಟ್

Update: 2023-04-16 22:43 IST

ಹೊಸದಿಲ್ಲಿ,ಎ.16: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗಾಗಿ ಸರ್ವೋಚ್ಚ ನ್ಯಾಯಾಲಯವು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದಲ್ಲಿ ನೂತನ ಸಂವಿಧಾನ ಪೀಠವನ್ನು ರಚಿಸಿದೆ.

ಪೀಠವು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಎಸ್.ರವೀಂದ್ರ ಭಟ್, ಪಿ.ಎಸ್.ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನೂ ಒಳಗೊಂಡಿರಲಿದೆ. ಎ.18ರಿಂದ ವಿಚಾರಣೆಯು ಆರಂಭವಾಗಲಿದೆ.

ಸಲಿಂಗ ವಿವಾಹಗಳಿಗೆ ಮಾನ್ಯತೆಯನ್ನು ಕೋರಿರುವ ಅರ್ಜಿದಾರರು,ತಮ್ಮ ಆಯ್ಕೆಯ ವ್ಯಕ್ತಿಯನ್ನು ವಿವಾಹವಾಗುವ ಹಕ್ಕನ್ನು ಎಲ್ಜಿಬಿಟಿಕ್ಯೂಐಎ+ ಸಮುದಾಯಕ್ಕೂ ವಿಸ್ತರಿಸಬೇಕು ಎಂದು ವಾದಿಸಿದ್ದಾರೆ.

ಅರ್ಜಿಗಳನ್ನು ಕೇಂದ್ರ ಸರಕಾರವು ವಿರೋಧಿಸಿದೆ.

ಸಂಗಾತಿಗಳಾಗಿ ಸಹಜೀವನ ಮತ್ತು ಸಲಿಂಗ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದಿರುವುದನ್ನು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯನ್ನು ಒಳಗೊಂಡಿರುವ ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಗೆ ಹೋಲಿಸಲಾಗದು ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಕೇಂದ್ರ ಸರಕಾರವು ಹೇಳಿತ್ತು.

ಸಲಿಂಗಿಗಳ ಸಂಬಂಧವು ಘನತೆಯ ಹಕ್ಕಿನ ಭಾಗವಾಗಿ ಸರಕಾರದ ಮಾನ್ಯತೆ ಪಡೆಯಬಹುದೇ ಎನ್ನುವುದು ಇಲ್ಲಿರುವ ಪ್ರಶ್ನೆಯಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ವಾದಿಸಿದ್ದರು.

ಸರಕಾರದ ನಿಲುವು, ವಿರುದ್ಧ ಲಿಂಗಗಳ ನಡುವೆ ಮಾತ್ರ ವಿವಾಹಕ್ಕೆ ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿರುವ ಆರೆಸ್ಸೆಸ್ ಮತ್ತು ಜಮೀಯತ್ ಉಲಮಾ-ಇ-ಹಿಂದ್ ನಿಲುವುಗಳಿಗೆ ಅನುಗುಣವಾಗಿದೆ.

ಈ ನಡುವೆ, ಸಲಿಂಗ ಕಾಮವನ್ನು ಅಪರಾಧಮುಕ್ತಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ 2018ರ ತೀರ್ಪು ಕುಟುಂಬ ಮತ್ತು ಸಂಗಾತಿಗಳ ಆಯ್ಕೆಯ ವ್ಯಕ್ತಿಗತ ಹಕ್ಕನ್ನೂ ಎತ್ತಿಹಿಡಿದಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

Similar News