ಆರೆಸ್ಸೆಸ್-ಬಿಜೆಪಿಯದ್ದು 'ಗೋಮೂತ್ರಧಾರಿ ಹಿಂದುತ್ವ': ಉದ್ಧವ್ ಠಾಕ್ರೆ ಕಿಡಿ

Update: 2023-04-17 03:10 GMT

ಮುಂಬೈ: ಕಾಂಗ್ರೆಸ್ ಜತೆ ಕೈಜೋಡಿಸಿದ ಶಿವಸೇನೆಯನ್ನು ಟೀಕಿಸುತ್ತಿರುವ ಬಿಜೆಪಿ ವಿರುದ್ಧ ಕಟು ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, "ಆರೆಸ್ಸೆಸ್-ಬಿಜೆಪಿಯದ್ದು ಗೋಮೂತ್ರಧಾರಿ ಹಿಂದುತ್ವ" ಎಂದು ಲೇವಡಿ ಮಾಡಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟ ವಿಭಜನೆಗೊಳ್ಳುವ ವದಂತಿಗಳ ನಡುವೆಯೇ ನಾಗ್ಪುರದಲ್ಲಿ ರವಿವಾರ ಮಹಾರಾಷ್ಟ್ರ ವಿಕಾಸ ಅಗಾಡಿ ಶಕ್ತಿಪ್ರದರ್ಶನ ಮಾಡಿದೆ. ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯ ಹಿಂದುತ್ವ ರಾಷ್ಟ್ರೀಯವಾದ ಹಾಗೂ ದೇಶಕ್ಕಾಗಿ ಬಲಿದಾನ ಮಾಡುವಂಥದ್ದು ಎಂದು ಸ್ಪಷ್ಟಪಡಿಸಿದರು.

"ಒಂದು ಕಡೆ ಅವರು ಹನುಮಾನ್ ಛಾಲೀಸ್ ಓದುತ್ತಾರೆ. ಇನ್ನೊಂದೆಡೆ ಮಸೀದಿಗೆ ಹೋಗಿ ಖವ್ವಾಲಿ ಕೇಳುತ್ತಾರೆ. ಇದು ಅವರ ಹಿಂದುತ್ವವೇ? ಉತ್ತರಪ್ರದೇಶದಲ್ಲಿ ಉರ್ದು ಭಾಷೆಯಲ್ಲಿ ಮನ್ ಕಿ ಬಾತ್ ನಡೆಸುತ್ತಾರೆ. ಇದು ಅವರ ಹಿಂದುತ್ವವೇ? ನಮ್ಮ ಹಿಂದುತ್ವ ದೇಶಕ್ಕಾಗಿ ಬಲದಾನ ಮಾಡುವಂಥದ್ದು" ಎಂದು ರ್ಯಾಲಿಯಲ್ಲಿ ಠಾಕ್ರೆ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

"ನಾನು ಕಾಂಗ್ರೆಸ್ ಜತೆ ಕೈಜೋಡಿಸಿ ಹಿಂದುತ್ವ ಬಿಟ್ಟಿದ್ದೇನೆ ಎಂದು ಪ್ರತಿ ಬಾರಿ ಆರೋಪಿಸಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಹಿಂದೂಗಳಿಲ್ಲವೇ? ಆರೆಸ್ಸೆಸ್-ಬಿಜೆಪಿ ಹಿಂದುತ್ವ ಗೋಮೂತ್ರಧಾನಿ ಹಿಂದುತ್ವ" ಎಂದು ಲೇವಡಿ ಮಾಡಿದರು.

"ನಾವು ಸಾರ್ವಜನಿಕ ಸಭೆ ನಡೆಸಿದ ಸಂಭಾಜಿನಗರದಲ್ಲಿ ಅವರು ಗೋಮೂತ್ರ ಸಿಂಪಡಿಸಿದ್ದಾರೆ. ಅವರು ಒಂದಷ್ಟು ಗೋಮೂತ್ರ ಸೇವಿಸಬೇಕಿತ್ತು. ಆಗ ಅವರು ನಮ್ಮ ರಾಷ್ಟ್ರೀಯತೆ ಆಧರಿತ ಹಿಂದುತ್ವದ ಬಗ್ಗೆ ಅವರು ಇನ್ನಷ್ಟು ಜಾಣರಾಗುತ್ತಿದ್ದರು" ಎಂದು ಚುಚ್ಚಿದರು.

Similar News