×
Ad

ಭ್ರಷ್ಟಾಚಾರ ಆರೋಪ: 500 ಕೋಟಿ ರೂ. ನಷ್ಟ ಪರಿಹಾರಕ್ಕೆ ಅಣ್ಣಾಮಲೈಗೆ ಡಿಎಂಕೆ ನೋಟಿಸ್

Update: 2023-04-17 12:33 IST

ಚೆನ್ನೈ: ಡಿಎಂಕೆ ಪಕ್ಷ ಹಾಗೂ ಪಕ್ಷದ ಅಧ್ಯಕ್ಷ ಎಂ.ಕೆ‌.ಸ್ಟಾಲಿನ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈಗೆ ಆಡಳಿತಾರೂಢ ಡಿಎಂಕೆ ಪಕ್ಷ ಕಾನೂನು ನೋಟಿಸ್ ಜಾರಿ ಮಾಡಿದ್ದು, ಹೇಳಿಕೆಗೆ ಕ್ಷಮೆ ಯಾಚಿಸಬೇಕು ಹಾಗೂ ಹೇಳಿಕೆಯಿಂದ ಆಗಿರುವ ಹಾನಿಗೆ ರೂ. 500 ಕೋಟಿ ಮೊತ್ತದ ಪರಿಹಾರ ನೀಡಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಿದೆ ಎಂದು indiatoday.in ವರದಿ ಮಾಡಿದೆ.

ಭಾರತಿ ಎಂಬವರ ನಿರ್ದೇಶನದ ಮೇರೆಗೆ ಹಿರಿಯ ವಕೀಲ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯ ಪಿ.ವಿಲ್ಸನ್ ಎಪ್ರಿಲ್ 15ರಂದು ನೋಟಿಸ್ ಜಾರಿ ಮಾಡಿದ್ದಾರೆ.

ಈ ನೋಟಿಸ್‌ನಲ್ಲಿ, ತಮಿಳುನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ವಿಫಲವಾಗಿರುವ ಅಣ್ಣಾಮಲೈ, ಡಿಎಂಕೆ ನಾಯಕರ ತೇಜೋವಧೆ ಮಾಡಲು ಹಲವಾರು ಬಗೆಯಲ್ಲಿ ಪ್ರಯತ್ನಿಸುತ್ತಿದ್ದು, ಅವರ ವಿರುದ್ಧ ಬಿಡುಗಡೆಯಾಗಿರುವ 'DMK Files' ಎಂಬ ವಿಡಿಯೊ ತುಣುಕು ಆಧಾರರಹಿತ ಆರೋಪಗಳನ್ನು ಹೊಂದಿದೆ ಎಂದು ಹೇಳಲಾಗಿದ್ದು, ಡಿಎಂಕೆಯ ಆಸ್ತಿ ಮೌಲ್ಯವನ್ನು ಉತ್ಪ್ರೇಕ್ಷಿತವಾಗಿ ರೂ. 1,408.94 ಕೋಟಿ ಎಂದು ತೋರಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ.

ಅಲ್ಲದೆ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಸ್ವತ್ತನ್ನು ಡಿಎಂಕೆಯ ಸ್ವತ್ತು ಎಂಬಂತೆ ವಿಡಿಯೊದಲ್ಲಿ ತೋರಿಸಲಾಗಿದೆ ಎಂದೂ ನೋಟಿಸ್‌ನಲ್ಲಿ ಪ್ರತಿಪಾದಿಸಲಾಗಿದೆ.

ಈ ಕಾನೂನು ನೋಟಿಸ್ ಜಾರಿ ಮಾಡಿರುವ ಆರ್.ಎಸ್.ಭಾರತಿ ಎಂಬವರು ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಲಾಗಿರುವ ರೂ. 5,270 ಕೋಟಿ ಮೊತ್ತದ ಕುರಿತೂ ಪ್ರಶ್ನಿಸಿದ್ದಾರೆ.

ಕೆ.ಅಣ್ಣಾಮಲೈ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ಡಿಎಂಕೆ ಪಕ್ಷವು, ಬಿಜೆಪಿ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿರುವ 'DMK Files' ವಿಡಿಯೊವನ್ನು ತೆಗೆದು ಹಾಕಬೇಕು ಎಂದೂ ಒತ್ತಾಯಿಸಿದೆ.

ಡಿಎಂಕೆ ಹಾಗೂ ಅದರ ನಾಯಕರ ಚಾರಿತ್ರ್ಯಹರಣಕ್ಕೆ ಕಾರಣವಾಗಿರುವ ನಿಮ್ಮ ಆರೋಪಗಳಿಗೆ ವಾಸ್ತವಿಕ ಆಧಾರ ಅಥವಾ ಪೂರಕ ಸಾಕ್ಷ್ಯಾಧಾರಗಳನ್ನು ಒದಗಿಸಬೇಕಾದುದು ನಿಮ್ಮ ಕಾನೂನಾತ್ಮಕ ಕರ್ತವ್ಯವಾಗಿದೆ ಎಂದೂ ಭಾರತಿ ಅವರು ಅಣ್ಣಾಮಲೈಗೆ ಸೂಚಿಸಿದ್ದಾರೆ.

"ಹಾಲಿ ಪ್ರಕರಣದಲ್ಲಿ ನೀವು ನಿಮ್ಮ ಆರೋಪಗಳಿಗೆ ಯಾವುದೇ ಆಧಾರವನ್ನು ಒದಗಿಸಿಲ್ಲ. ಆದ್ದರಿಂದ ನೀವು ಕಾನೂನಾತ್ಮಕ ಪರಿಶೀಲನೆಗೆ ಒಳಗಾಗಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾಬೇಕಾಗುತ್ತದೆ" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

"ಹೀಗಾಗಿ ತಮ್ಮ ಒಳ್ಳೆಯ ಹೆಸರು ಹಾಗೂ ಪ್ರಶ್ನಾತೀತ ವಿಶ್ವಾಸಾರ್ಹತೆಗೆ ಹಾನಿ ಮಾಡಿಕೊಂಡಿರುವ ಡಿಎಂಕೆ ಪಕ್ಷ ಹಾಗೂ ಅದರ ಅಧ್ಯಕ್ಷರಿಗೆ ಪರಿಹಾರ ನೀಡಬೇಕಾಗಿದೆ. ತಾತ್ಕಾಲಿಕವಾಗಿ ಪಕ್ಷದ ಅಧ್ಯಕ್ಷರ ವಿಶ್ವಾಸಾರ್ಹತೆಗೆ ಧಕ್ಕೆ ಮಾಡಿದ್ದಕ್ಕಾಗಿ ನೀಡಬೇಕಾದ ಪರಿಹಾರ ಮೊತ್ತವು ರೂ. 200 ಕೋಟಿ ಆಗಿದ್ದರೆ, ಪಕ್ಷದ ವಿಶ್ವಾಸಾರ್ಹತೆಗೆ ಧಕ್ಕೆ ಮಾಡಿದ್ದಕ್ಕೆ ರೂ. 300 ಕೋಟಿ ಪರಿಹಾರ ನೀಡಬೇಕು" ಎಂದೂ ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ.

48 ಗಂಟೆಯೊಳಗೆ ನೋಟಿಸ್‌ನ ಶರತ್ತುಗಳನ್ನು ಪೂರೈಸದಿದ್ದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಆರ್.ಎಸ್.ಭಾರತಿ ಎಚ್ಚರಿಸಿದ್ದಾರೆ.

Similar News