ಅತೀಕ್ ಅಹ್ಮದ್, ಸಹೋದರ ಅಶ್ರಫ್ ಹತ್ಯೆ ಬಗ್ಗೆ ಹಲವು ಪ್ರಶ್ನೆಗಳು; ಪೊಲೀಸ್ ನಡೆ ಸುತ್ತ ಸಂಶಯದ ಹುತ್ತ
ಹೊಸದಿಲ್ಲಿ: ಶನಿವಾರ ರಾತ್ರಿ ಪ್ರಯಾಗರಾಜ್ ಆಸ್ಪತ್ರೆಯ ಹೊರಗೆ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮತ್ತಾತನ ಸಹೋದರ ಅಶ್ರಫ್ ಅಹ್ಮದ್ ಅವರ ಹತ್ಯೆ ಪ್ರಕರಣ ಉತ್ತರ ಪ್ರದೇಶ ಪೊಲೀಸರಿಗೆ ಕಠಿಣ ಪ್ರಶ್ನೆಗಳನ್ನು ಎದುರಿಸುವಂತೆ ಮಾಡಿದೆ ಎಂದು NDTV ವರದಿ ಮಾಡಿದೆ.
ಫೆಬ್ರವರಿ 24 ರಂದು ನಡೆದ ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಅತೀಕ್ ಮತ್ತು ಅಶ್ರಫ್ ಇಬ್ಬರನ್ನೂ ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ತಡರಾತ್ರಿ ಏಕೆ ಕರೆದುಕೊಂಡು ಹೋಗಲಾಗಿತ್ತು ಎಂಬ ಪ್ರಶ್ನೆ ಈಗ ಎದ್ದಿದೆ.
ಅವರನ್ನು ಹೊತ್ತಿದ್ದ ಪೊಲೀಸ್ ವಾಹನ ಆಸ್ಪತ್ರೆಯ ಗೇಟ್ ಹೊರಗೆ ನಿಂತಿದ್ದು ಹಾಗೂ ಇಬ್ಬರೂ ಅಲ್ಲಿಂದ ಆಸ್ಪತ್ರೆಯತ್ತ ನಡೆದಿದ್ದರು. ಆದರೆ ಕುಖ್ಯಾತ ಕ್ರಿಮಿನಲ್ ಆಗಿರುವ ಅತೀಕ್‌ನನ್ನು ನೇರ ಆಸ್ಪತ್ರೆಯ ಕಟ್ಟಡದ ಸಮೀಪ ವಾಹನ ನಿಲ್ಲಿಸಿ ಏಕೆ ಕರೆದುಕೊಂಡು ಹೋಗಲಾಗಲಿಲ್ಲ ಎಂಬ ಪ್ರಶ್ನೆಯೆದ್ದಿದೆ.
ಅತೀಕ್ ಮತ್ತು ಅಶ್ರಫ್ ಜೊತೆಗೆ 20 ಪೊಲೀಸರ ತಂಡವಿತ್ತು. ಅವರಿಬ್ಬರನ್ನು ಮೂವರು ಶೂಟರ್‌ಗಳಿಂದ ಅವರು ಏಕೆ ರಕ್ಷಿಸಲು ವಿಫಲರಾದರು ಎಂಬ ಪ್ರಶ್ನೆಯಿದೆ. ಹಂತಕರನ್ನು ಪೊಲೀಸರು ಹಿಡಿಯುವ ಮುನ್ನ ಅವರು ಅತೀಕ್‌ನತ್ತ ಕನಿಷ್ಠ ಒಂಬತ್ತು ಗುಂಡು ಹಾರಿಸಿದ್ದರೆ ಅಶ್ರಫ್ ದೇಹಕ್ಕೆ ಐದು ಬುಲೆಟ್ ನುಗ್ಗಿದ್ದವು.
ಹಂತಕರು ಸುಮಾರು 20 ಸುತ್ತು ಗುಂಡು ಹಾರಿಸಿದ್ದರೆ ಪೊಲೀಸರು ಒಂದೇ ಒಂದು ಗುಂಡು ಹಾರಿಸಿಲ್ಲ. ಕೈಕೋಳ ಇದ್ದುದರಿಂದ ಅತೀಕ್ ಮತ್ತು ಅಶ್ರಫ್ ಅವರತ್ತ ಹಂತಕರು ಗುಂಡು ಹಾರಿಸುತ್ತಿದ್ದಂತೆ ಅವರು ನೆಲಕ್ಕುರುಳಿದ್ದರು. ದೃಶ್ಯಾವಳಿಗಳಲ್ಲಿ ಹಂತಕರು ಅವರತ್ತ ಗುಂಡಿನ ಮಳೆಗರೆಯುತ್ತಿದ್ದರೂ ಪೊಲೀಸರು ಗುಂಡು ಹಾರಿಸಿರಲಿಲ್ಲ.
ಹಂತಕರೆಂದು ಗುರುತಿಸಲಾದ ಅರುಣ್ ಮೌರ್ಯ, ಲವ್ಲೇಶ್ ತಿವಾರಿ ಮತ್ತು ಸನ್ನಿ ಸಿಂಗ್ ಮಾಧ್ಯಮದವರ ಸೋಗಿನಲ್ಲಿ ಆಮದಿತ ಬಂದೂಕುಗಳೊಂದಿಗೆ ಆಗಮಿಸಿದ್ದರು ಎಂದು ಹೇಳಲಾಗಿದೆ. ಅವರು ಈ ಇಬ್ಬರು ಬಂಧಿಗಳತ್ತ ಬರುವಾಗ ಪೊಲೀಸರು ಅವರನ್ನೇಕೆ ಪರಿಶೀಲಿಸಿಲ್ಲ ಎಂಬ ಪ್ರಶ್ನೆಯೂ ಇದೆ. ಹಂತಕರು ಆರೋಪಿಗಳ ಅದೆಷ್ಟು ಹತ್ತಿರ ಇದ್ದರೆಂದರೆ ಒಂದು ಗುಂಡು ಅತೀಕ್ ತಲೆ ಮೇಲಿದ್ದ ರುಮಾಲು ಹಾರಿಹೋಗುವಂತೆ ಮಾಡಿ ಆತ ನೆಲಕ್ಕುರುಳಿದ್ದ.