2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ವಂಚಕ ಸುಕೇಶ್ ಚಂದ್ರಶೇಖರ್
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ, ಸುಲಿಗೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ವಂಚಕ ಸುಕೇಶ್ ಚಂದ್ರಶೇಖರ್, ತಾನು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾನೆ ಎಂದು theprint.in ವರದಿ ಮಾಡಿದೆ.
ಶನಿವಾರ ಗುರುಗ್ರಾಮ ಮೂಲದ ಕಾನೂನು ಸಂಸ್ಥೆಯೊಂದರ ಮೂಲಕ ಐದು ಪುಟಗಳ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸುಕೇಶ್, "ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಭಾರತ ರಾಷ್ಟ್ರ ಸಮಿತಿ ನಡುವೆ ಸಂಬಂಧ ಇರುವಂತಿದೆ" ಎಂದು ಆರೋಪಿಸಿದ್ದಾನೆ.
ರಾಜಕಾರಣಿಗಳು ಹಾಗೂ ತಾರೆಯರೊಂದಿಗೆ ತನಗೆ ಸಂಬಂಧವಿದೆಯೆಂದು ಆಧಾರರಹಿತವಾಗಿ ಆತ ಪ್ರತಿಪಾದಿಸಿರುವುದು ಇದೇ ಮೊದಲೇನಲ್ಲ. ಈ ವಾರದ ಆರಂಭದಲ್ಲಿ ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿ ಸದ್ಯ ತಿಹಾರ್ ಜೈಲಿನಲ್ಲಿರುವ ಆಪ್‌ನ ಸತ್ಯೇಂದ್ರ ಜೈನ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಭಾರತ ರಾಷ್ಟ್ರ ಸಮಿತಿ ಪಕ್ಷದ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಸೇರಿದಂತೆ ಹಲವಾರು ರಾಜಕಾರಣಿಗಳೊಂದಿಗೆ ತಾನು ನಡೆಸಿದ್ದೇನೆ ಎನ್ನಲಾದ ವಾಟ್ಸ್ ಆ್ಯಪ್ ಚಾಟ್ ಅನ್ನು ಆತ ಬಿಡುಗಡೆ ಮಾಡಿದ್ದ.
ಶನಿವಾರ ತಾನು ತನ್ನ ವಾಟ್ಸ್ ಆ್ಯಪ್ ಚಾಟ್ ಅನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲು ಇದ್ದ ಕಾರಣಗಳ ಕುರಿತು ತನ್ನನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿರುವ ಕಾನೂನು ಸಂಸ್ಥೆಯ ಮೂಲಕ ಸ್ಪಷ್ಟೀಕರಣ ಹೇಳಿಕೆ ಬಿಡುಗಡೆ ಮಾಡಿದ್ದ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಕೆ.ಕವಿತಾ ಅವರನ್ನು ಉದ್ದೇಶಿಸಿ ಬರೆದಿರುವ ತನ್ನ ಪತ್ರದಲ್ಲಿ ತಾನು ಬಿಡುಗಡೆ ಮಾಡಿರುವ ವಾಟ್ಸ್ ಆ್ಯಪ್ ಚಾಟ್‌ಗಳು ರಾಜಕೀಯ ಪ್ರೇರಿತವೇ ಅಥವಾ ಹಣಕಾಸು ಲಾಭ ಪ್ರೇರಿತವೇ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಸುಕೇಶ್, ತನ್ನ ರಾಜಕೀಯ ಮಹತ್ವಾಕಾಂಕ್ಷೆ ಕುರಿತು ಮಾತನಾಡಿದ್ದಾನೆ ಎಂದು ಆ ಪತ್ರವನ್ನು ಲಭ್ಯವಾಗಿಸಿಕೊಂಡಿರುವ theprint.in ವರದಿ ಮಾಡಿದೆ.
ಆ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಸುಕೇಶ್, "ಇಲ್ಲ, ಮೇಲಿನ ಯಾರೂ ಅಲ್ಲ. ವಾಸ್ತವವೆಂದರೆ, ನಾನು ಮೊದಲೇ ಹೇಳಿದಂತೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಿದ್ದೇನೆ. ಅದಕ್ಕೂ ಮುನ್ನ ನಾನು ಈ ಎಲ್ಲ ಕೊಳಕು ರಹಸ್ಯಗಳು ಹಾಗೂ ಈ ವ್ಯಕ್ತಿಗಳ ಹೊರೆಯನ್ನು ನನ್ನ ಮನಸ್ಸು ಮತ್ತು ಹೃದಯದಿಂದ ಕಿತ್ತೊಗೆಯಲು ಬಯಸಿದ್ದೇನೆ" ಎಂದು ಉತ್ತರಿಸಿದ್ದಾನೆ.
"ನಾನು ಜನರಿಗಾಗಿ ಕೆಲಸ ಮಾಡುವ ಮುನ್ನ ಅಥವಾ ಅವರ ಮತಗಳ ಮೂಲಕ ಚುನಾಯಿತನಾಗುವ ಮುನ್ನ ಇತರರು ಭಾವಿಸಿರುವಂತೆ ಅಥವಾ ಹೇಳುವಂತೆ ನಾನು ಯಾರಿಂದಲೂ ಯಾವುದೇ ದುರ್ಲಾಭದ ಬಯಕೆಯಿಲ್ಲದೆ, ಸ್ವ ಇಚ್ಛೆಯಿಂದ ಈ ಎಲ್ಲ ಸಂಗತಿಗಳನ್ನು ಬಹಿರಂಗಗೊಳಿಸುತ್ತಿದ್ದೇನೆ" ಎಂದೂ ಆತ ಉತ್ತರಿಸಿದ್ದಾನೆ.