ತೆಲಂಗಾಣದ ಬೀಚುಪಳ್ಳಿ ಬಳಿ ನಡೆದ ಅಪಘಾತದಲ್ಲಿ ಬಿಜೆಪಿ ನಾಯಕಿ ನೀರಜಾ ರೆಡ್ಡಿ ಮೃತ್ಯು
ಹೈದರಾಬಾದ್: ರವಿವಾರ ಹೈದರಾಬಾದ್‌ನಿಂದ ಕರ್ನೂಲಿಗೆ ತೆರಳುತ್ತಿದ್ದಾಗ ನಡೆದ ಕಾರು ಅಪಘಾತದಲ್ಲಿ ಮಾಜಿ ಶಾಸಕಿ ಹಾಗೂ ಕರ್ನೂಲು ಜಿಲ್ಲೆಯ ಆಲೂರು ಕ್ಷೇತ್ರದ ಉಸ್ತುವಾರಿಯಾಗಿದ್ದ ಬಿಜೆಪಿ ನಾಯಕಿ ನೀರಜಾ ರೆಡ್ಡಿ ಮೃತಪಟ್ಟಿದ್ದಾರೆ. ತೆಲಂಗಾಣದ ಬೀಚುಪಳ್ಳಿ ಬಳಿ ಅವರ ಕಾರಿನ ಟೈರು ಸ್ಫೋಟಗೊಂಡಿದ್ದರಿಂದ ಅವರು ಕಾರು ಮಗುಚಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು news18.com ವರದಿ ಮಾಡಿದೆ.
ಕೊಂಡಾಪುರಂ ಪೊಲೀಸರ ಪ್ರಕಾರ, 52 ವರ್ಷದ ನೀರಜಾ ಅವರು ತೆಲಂಗಾಣಕ್ಕೆ ತೆರಳುತ್ತಿದ್ದಾಗ, ಅವರ ಕಾರಿನ ಟೈರು ಸ್ಫೋಟಗೊಂಡು, ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಅಪಘಾತ ಸಂಭವಿಸಿದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.
2009ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಲೂರು ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿದ್ದ ನೀರಜಾ ರೆಡ್ಡಿ, 2019ರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನಂತರ ಅವರು ಕೇಸರಿ ಪಾಳಯಕ್ಕೆ ಪಕ್ಷಾಂತರ ಮಾಡಿದ್ದರು.
ನೀರಜಾ ರೆಡ್ಡಿ ಅವರ ಪತಿ ಪಾಟೀಲ್ ಶಶಿ ರೆಡ್ಡಿ ಪಾತಿಕೊಂಡದ ಮಾಜಿ ಶಾಸಕರಾಗಿದ್ದರು. 1996ರಲ್ಲಿ ನಡೆದಿದ್ದ ಗುಂಪು ಘರ್ಷಣೆಯೊಂದರಲ್ಲಿ ಅವರು ಹತ್ಯೆಗೀಡಾಗಿದ್ದರು.