×
Ad

ಉಡುಪಿ: ಪ್ರಸಾದ್‌ ರಾಜ್ ಕಾಂಚನ್ 33.64 ಕೋಟಿ ರೂ. ಆಸ್ತಿ ಒಡೆಯ

Update: 2023-04-17 22:32 IST

ಉಡುಪಿ, ಎ.17: ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂದು ಮೊದಲ ಬಾರಿ ನಾಮಪತ್ರ ಸಲ್ಲಿಸಿರುವ ಖ್ಯಾತ ಉದ್ಯಮಿ 50 ವರ್ಷ ಪ್ರಾಯದ ಪ್ರಸಾದ್‌ರಾಜ್ ಕಾಂಚನ್ ಅವರು ಇದರೊಂದಿಗೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ತನ್ನ ಆದಾಯ, ಆಸ್ತಿಪಾಸ್ತಿಗಳ ವಿವರಗಳನ್ನು ನಾಮಪತ್ರದೊಂದಿಗೆ ಸಲ್ಲಿಸಿದ್ದಾರೆ.

ಅವರ ಅಫಿದಾವತ್‌ನಲ್ಲಿ ತಿಳಿಸಿರುವ ವಿವರಗಳಂತೆ ಪ್ರಸಾದ್‌ ರಾಜ್ ಕಾಂಚನ್‌ರ ಒಟ್ಟು ಆದಾಯ 33.64 ಕೋಟಿ ರೂ.ಗಳಾಗಿವೆ. ಇದರಲ್ಲಿ ಅವರ ಚರಾಸ್ಥಿ ಮೌಲ್ಯ 24,08,62,493 ರೂ.ಗಳಾದರೆ ಅವರಲ್ಲಿರುವ ಸ್ಥಿರಾಸ್ಥಿಗಳ ಒಟ್ಟು ಮೌಲ್ಯ 9,56,38,000 ರೂ.ಗಳಾಗಿವೆ. ಇದರೊಂದಿಗೆ ಕಾಂಚನ್ ಅವರು ಒಟ್ಟು 6,16,82,509 ರೂ. ಸಾಲ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದಾರೆ.

ಇದೇ ವೇಳೆ ಕಾಂಚನ್ ಅವರ ಪತ್ನಿಯ ಒಟ್ಟು ಆದಾಯ 28.64 ಕೋಟಿ ರೂ.ಗಳಾಗಿವೆ. ಇವುಗಳಲ್ಲಿ ಅವರ ಚರಾಸ್ಥಿಯ ಮೌಲ್ಯ 24.68 ಕೋಟಿ ರೂ.ಗಳಾದರೆ, ಸ್ಥಿರಾಸ್ಥಿಯ ಮೌಲ್ಯ 3.96 ಕೋಟಿ ರೂ.ಗಳಾಗಿವೆ. ಕಾಂಚನ್ ಅವರು 3 ಲಕ್ಷ ರೂ. ಹಾಗೂ ಪತ್ನಿ 2 ಲಕ್ಷ ರೂ. ನಗದು ಹೊಂದಿದ್ದಾರೆ.

ಕಾಂಚನ್ ಅವರ ವಿವಿಧ ಬ್ಯಾಂಕ್ ಖಾತೆಗಳಲ್ಲಿ 6,74,34,754 ರೂ. ಠೇವಣಿ ಇದೆ. ಹೆಂಡತಿ ಖಾತೆಯಲ್ಲಿ 1,66,61,058 ರೂ. ಹಣವಿದೆ. ಶೇರು ಮಾರುಕಟ್ಟೆ, ಬಾಂಡ್, ಮ್ಯೂಚುವಲ್ ಫಂಡ್‌ಗಳಲ್ಲಿ 3,64,78,365 ರೂ. ಹೂಡಿಕೆ ಮಾಡಿದ್ದಾರೆ.  59,90,936 ರೂ.  ಮೌಲ್ಯದ ಉಳಿತಾಯ ಪ್ರಮಾಣಪತ್ರ, ವಿಮೆ ಹೊಂದಿದ್ದಾರೆ. ಕಾಂಚನ್ ಬಳಿ 11.23 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 47,40,884 ರೂ. ಮೌಲ್ಯದ ವಾಹನ, ಹೆಂಡತಿ ಬಳಿ 44.92 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ ಎಂದು ಅಫಿದಾವತ್‌ನಲ್ಲಿ ತಿಳಿಸಲಾಗಿದೆ.

ಪ್ರಸಾದ್‌ರಾಜ್ ಕಾಂಚನ್ ವಿರುದ್ಧ ಇದೇ ಎ.12ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣವನ್ನು ದಾಖಲಾಗಿದೆ. ಅದು ಚುನಾವಣೆಗೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳ ಕುರಿತಂತಿದೆ.

ಕೃಷ್ಣಮೂರ್ತಿ ಆಚಾರ್ಯ: ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಕೆ.ಕೃಷ್ಣಮೂರ್ತಿ ಅವರ ಅಫಿದಾವತ್‌ನಲ್ಲಿ ತಿಳಿಸಿರುವಂತೆ ಅವರ ಪತ್ನಿ, ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಪತಿಗಿಂತ ಶ್ರೀಮಂತೆ ಎನಿಸಿಕೊಂಡಿದ್ದಾರೆ.

ಕೃಷ್ಣಮೂರ್ತಿ ಆಚಾರ್ಯರ ಒಟ್ಟು ಆದಾಯ: 68ಲಕ್ಷ ರೂ. ಚರಾಸ್ತಿ: 5 ಲಕ್ಷ ರೂ. ಹಾಗೂ ಸ್ಥಿರಾಸ್ತಿ: 63ಲಕ್ಷ ರೂ. ಅವರಿಗೆ 64.80ಲಕ್ಷ ರೂ. ಸಾಲವಿದೆ. ಇನ್ನು ಪತ್ನಿ ಅಮೃತಾ ಕೃಷ್ಣಮೂರ್ತಿ ಅವರ ಒಟ್ಟು ಆದಾಯ: 1.09ಕೋಟಿ ರೂ. ಇದರಲ್ಲಿ ಚರಾಸ್ತಿ ಮೌಲ್ಯ: 9.48ಲಕ್ಷ ರೂ ಹಾಗೂ ಸ್ಥಿರಾಸ್ತಿ ಮೌಲ್ಯ: 1ಕೋಟಿ ರೂ. ಆಗಿದೆ.

ಗುರ್ಮೆ ಸುರೇಶ್ ಶೆಟ್ಟಿ: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಿರುವ ಗರ್ಮೆ ಸುರೇಶ್ ಶೆಟ್ಟಿ (60) ಅಫಿದಾವತ್‌ನಲ್ಲಿ ಸಲ್ಲಿಸಿರುವ ಮಾಹಿತಿಯಂತೆ ಉದ್ಯಮಿಯೂ ಆಗಿರುವ ಅವರ ಒಟ್ಟು ಆದಾಯ 29.49 ಕೋಟಿ ರೂ. ಗಳಾಗಿವೆ. ಇವುಗಳಲ್ಲಿ ಚರಾಸ್ಥಿಯ ಮೌಲ್ಯ 10.12 ಕೋಟಿ ರೂ.ಗಳಾದರೆ,  ಸ್ಥಿರಾಸ್ಥಿಗಳ ಒಟ್ಟು ಮೌಲ್ಯ 19.37 ಕೋಟಿ ರೂ.ಗಳಾಗಿವೆ.

ಇನ್ನು ಸುರೇಶ್ ಶೆಟ್ಟಿ ಅವರ ಪತ್ನಿ ವಿಜಯಾ ಶೆಟ್ಟಿ ಅವರಲ್ಲಿ 1.54 ಕೋಟಿ ರೂ.ಚರಾಸ್ಥಿ ಇದೆ. ಅದೇ ರೀತಿ ಮಗ ಸೌರಬ್ ಶೆಟ್ಟಿ  ಬಳಿ 2.18 ಕೋಟಿ ರೂ.ಚರಾಸ್ಥಿ ಹಾಗೂ 2.99 ಕೋಟಿ ರೂ. ಸ್ಥಿರಾಸ್ಥಿಯಿದೆ. ವಿವಿಧ ಬ್ಯಾಂಕುಗಳು ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ಸುರೇಶ್ ಶೆಟ್ಟಿ ಅವರಿಗೆ 1.49 ಕೋಟಿ ರೂ.ಸಾಲವಿದ್ದರೆ, ಮಗನ ಹೆಸರಿನಲ್ಲಿ 99.97 ಲಕ್ಷರೂ. ಸಾಲವಿದೆ.

ಸುರೇಶ್ ಶೆಟ್ಟಿ ಅವರ ವಿರುದ್ಧ ಕಾರವಾರ ನಗರ, ಬೆಂಗಳೂರಿನ ವಿಶೇಷ ತನಿಖಾ ತಂಡ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ಉತ್ತರ ರೇಂಜ್‌ನಲ್ಲಿ   2010, 2015ರಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳು ಕಬ್ಬಿಣದ ಅದಿರಿನ ಅಕ್ರಮ ಸಾಗಾಟ ಹಾಗೂ ಅಕ್ರಮ ಗಣಿಗಾರಿಕೆ ಮತ್ತು ತ್ಯಾಜ್ಯವನ್ನು ಅಕ್ರಮವಾಗಿ ಎಸೆದಿರುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅಫಿದಾವತ್‌ನಲ್ಲಿ ತಿಳಿಸಲಾಗಿದ್ದು, ಯಾವುದೇ ಪ್ರಕರಣಗಳ ಬಗ್ಗೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿಲ್ಲ ಎಂದು ಹೇಳಲಾಗಿದೆ.

Similar News