×
Ad

9 ರಾಜ್ಯಗಳಲ್ಲಿ ಬಿಸಿ ಗಾಳಿ ಎಚ್ಚರಿಕೆ; 45 ಡಿಗ್ರಿ ತಲುಪಿದ ತಾಪಮಾನ

Update: 2023-04-18 10:08 IST

ಹೊಸದಿಲ್ಲಿ: ಪಶ್ಚಿಮ ಬಂಗಾಳ, ಬಿಹಾರ ಹಾಗೂ ಆಂಧ್ರಪ್ರದೇಶಗಳಲ್ಲಿ ಉಷ್ಣಾಂಶ ಅಪಾಯಕಾರಿ ಮಟ್ಟವನ್ನು ತಲುಪುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಸಿಕ್ಕಿಂ, ಜಾರ್ಖಂಡ್, ಒಡಿಶಾ ಹಾಗೂ ಉತ್ತರ ಪ್ರದೇಶದಲ್ಲಿ ಉಷ್ಣಗಾಳಿ ಬೀಸುವ ಸಾಧ್ಯತೆಯನ್ನು ಇಲಾಖೆ ಅಂದಾಜಿಸಿದೆ. ಇದರೊಂದಿಗೆ ದೇಶಾದ್ಯಂತ ಕಡುಬೇಸಿಗೆ ಆರಂಭವಾಗುವ ಸ್ಪಷ್ಟ ಸೂಚನೆ ಲಭ್ಯವಾಗಿದೆ.

ಆದಾಗ್ಯೂ ಪಶ್ಚಿಮ ಪ್ರಕ್ಷುಬ್ಧತೆ ಕಾರಣದಿಂದ ಮಂಗಳವಾರ ಜಮ್ಮು & ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಗಾಳಿ- ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂಜಾಬ್ ಹಾಗೂ ಹರ್ಯಾಣದಲ್ಲಿ ಸೋಮವಾರ ಬಿಸಿ ಗಾಳಿಯ ವಾತಾವರಣ ಇತ್ತು. ಮಂಗಳವಾರ ಕೂಡಾ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ಉಷ್ಣಮಾರುತ ಅಥವಾ ಬಿಸಿಗಾಳಿ ಸಾಧ್ಯತೆ ಬಗೆಗಿನ ಆರೆಂಜ್ ಅಲರ್ಟ್ ಎನ್ನುವುದು, ಕಠಿಣ ಪರಿಶ್ರಮದಿಂದ ಅಥವಾ ಸುಧೀರ್ಘ ಅವಧಿಗೆ ಬಿಸಿಲಿನಲ್ಲಿ ಕೆಲಸ ಮಾಡುವವರು ಉಷ್ಣ ಸಂಬಂಧಿ ಅಸ್ವಸ್ಥತೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನುವ ಸೂಚಕವಾಗಿದೆ. ಮಹಾರಾಷ್ಟ್ರದ ಸರ್ಕಾರಿ ಕಾರ್ಯಕ್ರಮದಲ್ಲಿ ಹಲವು ಗಂಟೆಗಳ ಕಾಲ ಕುಳಿತ 13 ಮಂದಿ ಮೃತಪಟ್ಟ ಘಟನೆಯ ಬಳಿಕ ಈ ಮುನ್ಸೂಚನೆ ನೀಡಲಾಗಿದೆ.

ನವಜಾತ ಶಿಶುಗಳು, ವೃದ್ಧರು ಹಾಗೂ ತೀವ್ರತರ ಅಸ್ವಸ್ಥತೆ ಇರುವವರಿಗೆ ಅಪಾಯ ಸಾಧ್ಯತೆ ಅಧಿಕ ಎಂದು ಹೇಳಲಾಗಿದೆ. ಸಾಕಷ್ಟು ನೀರು ಸೇವಿಸುವುದು, ಓಆರ್‌ಎಸ್ ಸೇವನೆ ಅಥವಾ ಮನೆಯಲ್ಲೇ ಸಿದ್ಧಪಡಿಸಿದ ಪಾನೀಯಗಳನ್ನು ಹೆಚ್ಚುಹೆಚ್ಚಾಗಿ ಸೇವಿಸುವ ಮೂಲಕ ನೀರಿನ ಅಂಶ ದೇಹದಲ್ಲಿ ಹೆಚ್ಚು ಉಳಿಯುವಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಇಲಾಖೆ ಸಲಹೆ ಮಾಡಿದೆ.

"ಪೂರ್ವದ ಕಡೆಯಿಂದ ಅಥವಾ ಬಂಗಾಳಕೊಲ್ಲಿಯ ಕಡೆಯಿಂದ ಬೀಸುವ ಗಾಳಿಯಿಂದಾಗಿ ಪೂರ್ವ ರಾಜ್ಯಗಳಲ್ಲಿ ಮೋಡಕಟ್ಟುವ ಕಾರಣದಿಂದ ಅಲ್ಪಮಟ್ಟಿಗೆ ತಾಪಮಾನ ಇಳಿಕೆ ಸಾಧ್ಯತೆ ಇದೆ. ಆದರೆ ಉಷ್ಣ, ಒಣ ಗಾಳಿ ಪೂರ್ವ ಭಾರತದ ವಾಯವ್ಯ ಕಡೆಯಿದ ಬೀಸುವ ಕಾರಣದಿಂದ ಆರ್ದ್ರತೆ ಹೆಚ್ಚಲಿದೆ. ಈ ಕಾರಣದಿಂದ ಪೂರ್ವ ರಾಜ್ಯಗಳು ಬಿಸಿ ತಡೆಯುವ ಕ್ರಮಗಳನ್ನು ಸೂಕ್ತವಾಗಿ ಅನುಸರಿಸಬೇಕು" ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಂ.ಮೊಹಾಪಾತ್ರ ಹೇಳಿದ್ದಾರೆ.

Similar News