ಕರ್ನಾಟಕದಲ್ಲಿ ಅಮುಲ್ ಬಹಿಷ್ಕರಿಸುವ ಅಗತ್ಯವಿಲ್ಲ: ಗುಜರಾತ್ ಸಿಎಂ ಭೂಪೇಂದ್ರ ಪಟೇಲ್
ಸೂರತ್: ಕರ್ನಾಟಕದಲ್ಲಿ ನಂದಿನಿ ಮತ್ತು ಅಮುಲ್ ನಡುವಿನ ತಿಕ್ಕಾಟ ತೀವ್ರಗೊಂಡಿರುವ ಬೆನ್ನಿಗೇ ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದಲ್ಲಿ ಅಮುಲ್ ಅನ್ನು ಬಹಿಷ್ಕರಿಸಬೇಕಾದ ಅಗತ್ಯವಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ತನ್ನ ಹಾಲು ಉತ್ಪನ್ನಗಳನ್ನು ಪೂರೈಸಲಾಗುವುದು ಎಂದು ಇತ್ತೀಚೆಗೆ ಅಮುಲ್ ಪ್ರಕಟಿಸಿದ ನಂತರ ನಂದಿನಿ ಹಾಗೂ ಅಮುಲ್ ಹಾಲು ಒಕ್ಕೂಟಗಳ ನಡುವೆ ವಿವಾದ ಸೃಷ್ಟಿಯಾಗಿದೆ.
ಸೋಮವಾರ ಈ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, "ನನ್ನ ದೃಷ್ಟಿಯಲ್ಲಿ ಅಮುಲ್ ಅನ್ನು ಬಹಿಷ್ಕರಿಸುವ ಅಗತ್ಯವಿಲ್ಲ. ನಿಮಗೇನು ಬೇಕೊ ಅದನ್ನು ಮಾಡುತ್ತಲೇ ಇರಿ. ಒಂದು ವೇಳೆ ಅಮುಲ್ ಏನಾದರೂ ಕಸಿದುಕೊಂಡರೆ ಮಾತ್ರ ಅದು ಪ್ರತಿಭಟಿಸಬೇಕಾದ ಸಂಗತಿಯಾಗುತ್ತದೆ" ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿನ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು, ಅಮುಲ್ ಸಂಸ್ಥೆಗೆ ದಕ್ಷಿಣ ಭಾರತ ರಾಜ್ಯವಾದ ಕರ್ನಾಟಕಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ನಂದಿನಿಯನ್ನು ಮುಗಿಸಲು ಆಡಳಿತಾರೂಢ ಬಿಜೆಪಿ ಸರ್ಕಾರ ಬಯಸಿದೆ ಎಂದು ಆರೋಪಿಸಿದ್ದವು.
ಅಮುಲ್‌ನೊಂದಿಗೆ ನಂದಿನಿಯನ್ನು ವಿಲೀನಗೊಳಿಸಲೆಂದೇ ನಂದಿನಿ ಹಾಲು ಉತ್ಪನ್ನಗಳ ಕೊರತೆಯನ್ನು ಸೃಷ್ಟಿಸಲಾಗಿದೆ ಎಂಬ ಸಂಶಯವನ್ನೂ ಅವು ವ್ಯಕ್ತಪಡಿಸಿದ್ದವು. ಆದರೆ, ಈ ಆರೋಪವನ್ನು ನಿರಾಕರಿಸಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು, ಅಮುಲ್‌ನಿಂದ ನಂದಿನಿ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿತ್ತು.
ಇದರ ಬೆನ್ನಿಗೇ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಮುಲ್ ಅನ್ನು ಬಹಿಷ್ಕರಿಸಬಾರದು ಎಂದು ಕರೆ ನೀಡಿದ್ದಾರೆ.