×
Ad

ತಾನು ಕೊಲೆಯಾದರೆ ಸಿಎಂ, ಸಿಜೆಐಗೆ ಕೊಡಲು ಪತ್ರ ಬರೆದಿಟ್ಟಿದ್ದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌

Update: 2023-04-18 13:47 IST

ಪ್ರಯಾಗರಾಜ್:‌ ತಾನು ಮೃತಪಟ್ಟಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಸುಪ್ರೀಂ ಕೋರ್ಟ್‌ (Supreme Court) ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಬೇಕೆಂದು ಸೂಚಿಸಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ (Atiq Ahmed) ಬರೆದಿದ್ದಾನೆನ್ನಲಾದ ಪತ್ರವನ್ನು ಅವರಿಗೆ ಕಳುಹಿಸಲಾಗುತ್ತಿದೆ ಎಂದು ಇತ್ತೀಚೆಗೆ ಹತ್ಯೆಗೀಡಾದ ಅತೀಕ್‌ ಅಹ್ಮದ್‌ ವಕೀಲರಾದ ವಿಜಯ್‌ ಮಿಶ್ರಾ ಹೇಳಿದ್ದಾರೆ.

"ಸೀಲ್‌ ಮಾಡಲಾದ ಲಕೋಟೆಯಲ್ಲಿರುವ ಈ ಪತ್ರ ನನ್ನ ಬಳಿ ಇಲ್ಲ ಅಥವಾ ಅದನ್ನು ನಾನು ಕಳುಹಿಸಿಲ್ಲ. ಅದನ್ನು ಬೇರೆಲ್ಲೋ ಇರಿಸಲಾಗಿದೆ ಹಾಗೂ ಬೇರೊಬ್ಬರು ಕಳುಹಿಸುತ್ತಾರೆ. ಅದರಲ್ಲೇನಿದೆ ಎಂದು ಗೊತ್ತಿಲ್ಲ," ಎಂದು ಮಿಶ್ರಾ ಹೇಳಿದ್ದಾರೆ.

ಅತೀಕ್‌ ಅಹ್ಮದ್‌ (60) ಮತ್ತಾತನ ಸಹೋದರ ಅಶ್ರಫ್‌ನನ್ನು ಶನಿವಾರ ರಾತ್ರಿ ಪ್ರಯಾಗರಾಜ್‌ನ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಪತ್ರಕರ್ತರ ಸೋಗು ಧರಿಸಿದ್ದ ಹಂತಕರು ತೀರಾ ಸನಿಹದಲ್ಲಿ ಗುಂಡಿಕ್ಕಿ ಸಾಯಿಸಿದ್ದರು. ಈ ಸಂದರ್ಭ ಪೊಲೀಸರು ಯಾವುದೇ ಪ್ರತಿ ಗುಂಡು ಹಾರಾಟ ನಡೆಸದೇ ಇರುವುದು ಸಾಕಷ್ಟು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಅತೀಕ್‌ ಮತ್ತಾತನ ಸಹೋದರನಿಗೆ ಈ ಸಂದರ್ಭ ಕೈಕೋಳ ತೊಡಿಸಲಾಗಿತ್ತು  ಹಾಗೂ ಅವರ ಈ ಭಯಾನಕ ಹತ್ಯೆ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿತ್ತು.

"ಯಾವುದೇ ದುರಂತ ಸಂಭವಿಸಿದರೆ ಅಥವಾ ಕೊಲೆಗೀಡಾದರೆ ಸೀಲ್‌ ಮಾಡಲ್ಪಟ್ಟ ಲಕೋಟೆಯಲ್ಲಿರುವ ಪತ್ರವನ್ನು ಉತ್ತರ ಪ್ರದೇಶ ಸಿಎಂ ಮತ್ತು ಸಿಜೆಐ ಅವರಿಗೆ ಕಳುಹಿಸಬೇಕೆಂದು ಅತೀಕ್‌ ಹೇಳಿದ್ದ" ಎಂದು ಮಿಶ್ರಾ ಹೇಳಿದ್ದಾರೆ.

ಎಪ್ರಿಲ್‌ 13 ರಂದು ಝಾನ್ಸಿಯಲ್ಲಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಅತೀಕ್‌ ಅಹ್ಮದ್‌ನ ಪುತ್ರ ಅಸದ್‌ನ ಅಂತ್ಯಕ್ರಿಯೆ ಈ ಘಟನೆಗಿಂತ ಕೇವಲ ಕೆಲವೇ ಗಂಟೆಗಳ ಮುಂಚೆ ನಡೆದಿತ್ತು.

ಇದನ್ನೂ ಓದಿ: ಬಿಜೆಪಿ ಸೇರಲಿದ್ದಾರೆಂಬ ವದಂ‌ತಿಯ ನಡುವೆ ತನ್ನ  ಟ್ವಿಟರ್ ಬಯೋದಿಂದ ಎನ್‌ಸಿಪಿ ಚಿಹ್ನೆ ತೆಗೆದ ಅಜಿತ್‌ ಪವಾರ್

Similar News