ಬಿಜೆಪಿ ನಾಯಕರ ವಿರುದ್ದ ಮಾನಹಾನಿಕರ ಹೇಳಿಕೆ: ಆಪ್ ನಾಯಕ ಗೋಪಾಲ್ ಬಂಧನ
ಹೊಸದಿಲ್ಲಿ: ಕಳೆದ ವರ್ಷ ರಾಜ್ಯ ವಿಧಾನಸಭೆ ಚುನಾವಣೆಯ ವೇಳೆ ಗುಜರಾತ್ ನ ಬಿಜೆಪಿ ನಾಯಕರಾದ ಹರ್ಷ್ ಸಾಂಘ್ವಿ ಹಾಗೂ ಸಿ.ಆರ್.ಪಾಟೀಲ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ್ ಇಟಾಲಿಯಾ ಅವರನ್ನು ಸೋಮವಾರ ಸೂರತ್ ಪೊಲೀಸರು ಬಂಧಿಸಿದ್ದಾರೆ. ನಂತರ ಇಟಾಲಿಯಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
“ನಾವು ಗೋಪಾಲ್ ಇಟಾಲಿಯಾ ಅವರ ವಿರುದ್ಧ ಬಾಕಿ ಇರುವ ಮಾನನಷ್ಟ ದೂರಿನಲ್ಲಿ ಅವರನ್ನು ಬಂಧಿಸಿದ್ದೇವೆ. ನಂತರ ಅವರನ್ನು ಅಪರಾಧ ವಿಭಾಗದ ಪೊಲೀಸ್ ಠಾಣೆಯಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು” ಎಂದು ಸೂರತ್ ಅಪರಾಧ ವಿಭಾಗದ ಎಲ್ ಡಿ ವಘಾಡಿಯಾ ಹೇಳಿದ್ದಾರೆ.
ಇಟಾಲಿಯಾ ಅವರನ್ನು ಬಂಧಿಸುವ ಕೆಲವು ದಿನಗಳ ಮೊದಲು ಸೂರತ್ ಕ್ರೈಂ ಬ್ರಾಂಚ್‌ನಿಂದ ನೋಟಿಸ್ ನೀಡಲಾಯಿತು. ಸೋಮವಾರ, ಮಧ್ಯಾಹ್ನ ತನ್ನ ಕಚೇರಿಯಲ್ಲಿ ಹಾಜರಾಗುವಂತೆ ಕೇಳಲಾಯಿತು. ಸೋಮವಾರ ತಮ್ಮ ಪಕ್ಷದ ಸದಸ್ಯರೊಂದಿಗೆ ಚರ್ಚೆ ನಡೆಸಿದ ಬಳಿಕ ಪೊಲೀಸರ ಮುಂದೆ ಇಟಾಲಿಯಾ ಹಾಜರಾದರು.
ಕಚೇರಿಗೆ ಬಂದ ನಂತರ, ಅಧಿಕಾರಿಗಳು ಇಟಾಲಿಯಾ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡರು ಮತ್ತು ಅವರನ್ನು ಬಂಧಿಸಲು ಕಾರ್ಯವಿಧಾನಗಳನ್ನು ನಡೆಸಿದರು ಎಂದು ಮೂಲಗಳನ್ನು ಉಲ್ಲೇಖಿಸಿ Indian Express ದಿನಪತ್ರಿಕೆ ತಿಳಿಸಿದೆ