×
Ad

ಎ.20: ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ನಾಮಪತ್ರ ಸಲ್ಲಿಕೆ

Update: 2023-04-18 19:51 IST

ಉಡುಪಿ, ಎ.18: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಎ.20ರಂದು ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಮಂಗಳವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಂದು ಬೆಳಗ್ಗೆ 10 ಗಂಟೆಗೆ ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಿಂದ ಪಾದಯಾತ್ರೆಯಲ್ಲಿ ತೆರಳಿ ಬನ್ನಂಜೆಯಲ್ಲಿರುವ ತಾಲೂಕು ಕಚೇರಿಯಲ್ಲಿ ಅಪರಾಹ್ನ 12:30ರ ಸುಮಾರಿಗೆ ನಾಮಪತ್ರ ಸಲ್ಲಿಸಲಾಗುತ್ತದೆ ಎಂದರು.

ಪಾದಯಾತ್ರೆಯು ಕಲ್ಸಂಕ, ಬನ್ನಂಜೆ ಮಾರ್ಗವಾಗಿ ತೆರಳಲಿದ್ದು, ಇದರಲ್ಲಿ 10ರಿಂದ 15 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ರಾಜ್ಯ ನಾಯಕರು ಹಾಗೂ ಜಿಲ್ಲಾ ಮಟ್ಟದ ನಾಯಕರು ಉಪಸ್ಥಿತರಿರುವರು ಎಂದವರು ಹೇಳಿದರು.

ಚುನಾವಣೆಯಲ್ಲಿ ಎದುರಾಗುವ ಸ್ಪರ್ಧೆಯ ಕುರಿತು ಪ್ರಶ್ನಿಸಿದಾಗ, ಚುನಾವಣೆ ಎಂದ ಮೇಲೆ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಮತಗಳನ್ನು ಕೇಳುವುದರಿಂದ ಮತದಾರರ ಬೆಂಬಲ ನಮಗೆ ಹೆಚ್ಚಿರುತ್ತದೆ ಎಂದರು.

ಕಾಪು ಕ್ಷೇತ್ರದಲ್ಲಿ ಸ್ಪರ್ಧಿಸುವ ನಿರೀಕ್ಷೆಯೊಂದಿಗೆ ಅಲ್ಲೇ ಎಲ್ಲಾ ಸಿದ್ಧತೆ ಮಾಡಿಕೊಂಡ ಮೇಲೆ ಈಗ ಉಡುಪಿಯಲ್ಲಿ ಸ್ಪರ್ಧಿಸುವುದು ಕಷ್ಟವೆನಿಸುವು ದಿಲ್ಲವೇ ಎಂದು ಪ್ರಶ್ನಿಸಿದಾಗ, ಪಕ್ಷದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತ ನಾಗಿ ಪಕ್ಷದ ಸೂಚನೆಯನ್ನು ಪಾಲಿಸುವುದು ನನ್ನ ಕರ್ತವ್ಯವಾಗಿದೆ. ಇದೀಗ ಉಡುಪಿಯಲ್ಲಿ ಜನಸೇವೆ ಮಾಡುವ ಅವಕಾಶವನ್ನು ಎದುರು ನೋಡುತಿದ್ದೇನೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ಡಬಲ್ ಇಂಜಿನ್ ಸರಕಾರದ ಸಾಧನೆ ಗಳು ಹಾಗೂ ಯೋಜನೆಗಳು, ಉಡುಪಿಯಲ್ಲಿ ಶಾಸಕ ಕೆ.ರಘುಪತಿ ಭಟ್ ಅವರ ಕಳೆದೈದು ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಮನೆಮನೆಗೆ ತಲುಪಿಸಿ ಮತ ಯಾಚಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಕೆ.ರಘುಪತಿ ಭಟ್ ಹಾಗೂ ಪದಾಧಿಕಾರಿಗಳಾದ ಕೆ. ರಾಘವೇಂದ್ರ ಕಿಣಿ, ಕುತ್ಯಾರು ನವೀನ್ ಶೆಟ್ಟಿ, ವೀಣಾ ಶೆಟ್ಟಿ, ವೀಣಾ ನಾಯ್ಕ್, ಕಿರಣ್‌ ಕುಮಾರ್, ಶ್ಯಾಮಲಾ ಕುಂದರ್, ಪ್ರತಾಪ್ ಹೆಗ್ಡೆ ಮಾರಾಳಿ, ದಿನಕರಬಾಬು ಮುಂತಾದವರು ಉಪಸ್ಥಿತರಿದ್ದರು.

Similar News