×
Ad

ಬಿಸಿಲ ಝಳದಿಂದ ಸಾವು: ವಹಿಸಬೇಕಾದ ಮುನ್ನೆಚ್ಚರಿಕೆಗಳು ಏನು?

ರುಪ್ಸಾ ಚಕ್ರವರ್ತಿ, ಪ್ರತೀಪ್ ಆಚಾರ್ಯ- indianexpress.com

Update: 2023-04-18 20:17 IST

ರವಿವಾರ, ಎ.16ರಂದು ನವಿ ಮುಂಬೈನ ಖಾರ್ಘರ್ ನಲ್ಲಿ ಒಂದು ಚೂರೂ ನೆರಳಿನಾಸರೆ ಇಲ್ಲದಿದ್ದ ಬಯಲು ಪ್ರದೇಶದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದವರ ಪೈಕಿ 11 ಜನರು ಉಷ್ಣಾಘಾತದಿಂದ ಮೃತಪಟ್ಟಿದ್ದಾರೆ. 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಮೂವರು ತೀವ್ರ ಅಸ್ವಸ್ಥರಾಗಿದ್ದಾರೆ. ಬಿರುಬಿಸಿಲಿನಲ್ಲಿ ನಿಂತುಕೊಂಡಿದ್ದ ಇತರ ನೂರಾರು ಮಂದಿ ನಿರ್ಜಲೀಕರಣದಿಂದ ಬಳಲಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿಯವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ಪ್ರದಾನಿಸಿದ ಈ ಸರಕಾರಿ ಕಾರ್ಯಕ್ರಮದಲ್ಲಿ ಅಂದಾಜು 20 ಲಕ್ಷ ಜನರು ಭಾಗವಹಿಸಿದ್ದರು.

ಉಷ್ಣಾಘಾತದ ವೇಳೆ ಶರೀರದಲ್ಲಿ ಏನು ಆಗುತ್ತದೆ?

ಉಷ್ಣಾಘಾತ ಅಥವಾ ಬಿಸಿಲಿನ ಹೊಡೆತವು ಅತ್ಯಂತ ಹೆಚ್ಚಿನ ತಾಪಮಾನ ಮತ್ತು ಆರ್ದ್ರತೆಗೆ ಒಡ್ಡಿಕೊಂಡಾಗ ಶರೀರದ ಅತಿಯಾದ ಬಿಸಿಯಾಗುವಿಕೆ ಅಥವಾ ಅಧಿಕ ತಾಪಮಾನದಲ್ಲಿ ಸುದೀರ್ಘ ಚಟುವಟಿಕೆಗಳ ಫಲಶ್ರುತಿಯಾಗಿದೆ. ಉಷ್ಣಾಘಾತವು ವೈದ್ಯಕೀಯ ತುರ್ತು ಸ್ಥಿತಿಯಾಗಿದ್ದು,ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅಗತ್ಯವಾಗಿರುತ್ತದೆ.

ಶರೀರವು ಬೆವರಲು ವಿಫಲಗೊಂಡಾಗ ಮತ್ತು ಅದರಿಂದಾಗಿ ಆವಿಯಾಗುವಿಕೆಯ ಮೂಲಕ ಉಷ್ಣತೆಯನ್ನು ಕಳೆದುಕೊಳ್ಳಲು ಅದಕ್ಕೆ ಸಾಧ್ಯವಾಗದಿದ್ದಾಗ ಕೋರ್ ಟೆಂಪರೇಚರ್ ಅಥವಾ ಆಂತರಿಕ ಅಂಗಾಂಗಗಳ ತಾಪಮಾನ ಹೆಚ್ಚುತ್ತದೆ. ತಣಿಸಿಕೊಳ್ಳಲು ಶರೀರವು ವಿಫಲಗೊಂಡಾಗ ಕೋರ್ ಟೆಂಪರೇಚರ್ ಕೆಲವೇ ನಿಮಿಷಗಳಲ್ಲಿ 106 ಡಿಗ್ರಿ ಫ್ಯಾರೆನ್ಹೀಟ್ ವರೆಗೆ ಹೆಚ್ಚಬಹುದು. ಇದು ಸಾವು ಸೇರಿದಂತೆ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರೋರ್ವರು ತಿಳಿಸಿದರು.

ಉಷ್ಣಾಘಾತದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ದಣಿವು, ತಲೆ ಸುತ್ತುವಿಕೆ, ತಲೆನೋವು, ವಾಕರಿಕೆ, ವಾಂತಿ, ಕಡಿಮೆ ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚಳ ಉಂಟಾಗುತ್ತವೆ.

ರವಿವಾರ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಉಷ್ಣಮಾರುತ ಎಚ್ಚರಿಕೆಯನ್ನು ನೀಡಿರಲಿಲ್ಲ. ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4.5 ಡಿ.ಸೆ.ಅಥವಾ ಹೆಚ್ಚು ಅಧಿಕವಾಗಿದ್ದರೆ ಮತ್ತು ನೈಜ ಗರಿಷ್ಠ ತಾಪಮಾನವು 37 ಡಿ.ಸೆ. ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಉಷ್ಣಮಾರುತ ಎಂದು ಐಎಂಡಿ ಪರಿಗಣಿಸುತ್ತದೆ.

ತೆರೆದ ಬಯಲಿನಲ್ಲಿ ಸುದೀರ್ಘ ಕಾಲ ಬಿಸಿಲಿಗೆ ಒಡ್ಡಿಕೊಂಡಿದ್ದು ಮತ್ತು ದೈಹಿಕ ಶ್ರಮ ರವಿವಾರದ ದುರಂತಕ್ಕೆ ಕಾರಣವಾಗಿರಬಹುದು. ಸಮಾವೇಶಲ್ಲಿ ಪಾಲ್ಗೊಂಡಿದ್ದ ಅನೇಕರು ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದರು ಮತ್ತು ಆಯಾಸ ಅವರ ಸ್ಥಿತಿಯನ್ನು ಉಲ್ಬಣಿಸಿರಬೇಕು ಎನ್ನುತ್ತಾರೆ ವೈದ್ಯರು.

ಬಿಸಿಲಿನಲ್ಲಿ ಹೊರ ಹೋಗುವುದಿದ್ದರೆ ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು?

►ನಿಮ್ಮ ಶರೀರ ನಿರ್ಜಲೀಕರಣಕ್ಕೆ ತುತ್ತಾಗದಂತೆ ನೋಡಿಕೊಳ್ಳಿ. ಬಾಯಾರಿಕೆಯಾಗಿರದಿದ್ದರೂ ಸಾಧ್ಯವಾದಾಗಲೆಲ್ಲ ನೀರನ್ನು ಕುಡಿಯುತ್ತಲೇ ಇರಿ. ನಿಮ್ಮೊಂದಿಗೆ ಸದಾ ನೀರಿನ ಬಾಟಲ್ ಇರಲಿ.

►ನಿಮ್ಮ ಶರೀರವನ್ನು ಚೆನ್ನಾಗಿ ಮುಚ್ಚಿಕೊಳ್ಳಿ. ಹಗುರ, ಸಡಿಲ, ಲಘು ಬಣ್ಣದ ಮತ್ತು ಗಾಳಿಯಾಡುವಂತಹ ಹತ್ತಿಯ ಬಟ್ಟೆಗಳನ್ನು ಧರಿಸಿ.

►ತಂಪು ಕನ್ನಡಕ, ಕೊಡೆ ಅಥವಾ ಹ್ಯಾಟ್ ಬಳಸಿ.

►ನೀವು ಅನಾರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಬಿಸಿಲಿನಲ್ಲಿ ಹೆಚ್ಚು ಕಾಲ ನಿಲ್ಲುವುದನ್ನು ತಪ್ಪಿಸಿ.

►ಮದ್ಯ, ಚಹಾ, ಕಾಫಿ ಮತ್ತು ಕಾರ್ಬನೀಕೃತ ಸೋಡಾ ಪಾನೀಯಗಳನ್ನು ಸೇವಿಸಬೇಡಿ. ಅವು ನೀರಿಗೆ ಬದಲಿಯಲ್ಲ. ನೀರಿಗಿಂತ ಬೇರೆ ಏನನ್ನಾದರೂ ನೀವು ಬಯಸಿದ್ದರೆ ಒಆರ್ಎಸ್ ಮತ್ತು ಮನೆಯಲ್ಲಿಯೇ ತಯಾರಿಸಿದ ಪಾನೀಯಗಳು ನಿಮ್ಮ ಜೊತೆಯಲ್ಲಿರಲಿ.

►ಅಧಿಕ ಪ್ರೋಟಿನ್ ಒಳಗೊಂಡಿರುವ ಆಹಾರ ಸೇವನೆಯಿಂದ ದೂರವಿರಿ.

►ತಲೆಯನ್ನು ಒದ್ದೆ ಬಟ್ಟೆಯಿಂದ ಮುಚ್ಚಿಕೊಳ್ಳಿ.

Similar News