×
Ad

ಉಡುಪಿ: ವಿಶಿಷ್ಟ ಕಾರ್ಯಕ್ರಮ ‘ಹಾಡು ಹರಟೆ’

Update: 2023-04-18 20:33 IST

ಉಡುಪಿ, ಎ.18: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,  ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಆಶಯದಲ್ಲಿ ಉಡುಪಿ ಬುಡ್ನಾರಿನಲ್ಲಿರುವ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ  ಸೋಮವಾರ ಸಂಜೆ ಆಯೋಜಿಸಲಾದ ವಿನೂತನ ಪ್ರಯೋಗ ‘ಹಾಡು ಹರಟೆ’ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಾಸ್ಯ ಕವಿ ಡುಂಡಿರಾಜ್, ಗಾಯಕ, ನಾಟಕ ನಿರ್ದೇಶಕ ಮತ್ತು ಸಂಗೀತಗಾರ ಗುರುರಾಜ ಮಾರ್ಪಳ್ಳಿ ಮತ್ತು ಹಾಸ್ಯ ಭಾಷಣಕಾರರಾದ ಸಂಧ್ಯಾ ಶೆಣೈ ಭಾಗವಹಿಸಿದ್ದರು.

ಈ ಮೂವರ ಕೂಡುವಿಕೆಯಲ್ಲಿ ನಡೆದ ಕವಿಯ ಎದುರಲ್ಲೇ ಕವಿತಾ ವಾಚನದ ನೂತನ ಕಾರ್ಯಕ್ರಮ ನಡೆಯಿತು. ‘ಚುಟುಕು ಕವಿ’ ಎಂದು ಪ್ರಸಿದ್ಧರಾದ ಡುಂಡಿರಾಜರು  ಉತ್ತಮವಾದ ಮತ್ತು ಮಾರ್ಮಿಕವಾದ ಕವನಗಳನ್ನೂ ಬರೆದಿದ್ದು, ಅವರ ಈ ಪ್ರತಿಭೆಯನ್ನು ಮಾರ್ಪಳ್ಳಿ ಸ್ವತಃ ರಾಗಬದ್ಧವಾಗಿ ಹಾಡಿ ತೋರಿಸಿದರೆ, ಸಂಧ್ಯಾ ಶೆಣೈ ಕವಿಯೊಡನೆ ಮಾತುಕತೆ ಮಾಡುತ್ತಾ ಹಾಸ್ಯದ ಹೊನಲನ್ನು ಹರಿಸಿದರು. ಹಾರ್ಮೋನಿಯಂನಲ್ಲಿ ಶಶಿಕಿರಣ್ ಮತ್ತು ತಬಲಾದಲ್ಲಿ ಕಾರ್ತಿಕ್ ಭಟ್ ಸಹಕರಿಸಿದರು.

ಇದಕ್ಕೆ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಡಾ.ಭಾರ್ಗವಿ ಐತಾಳ್ ಉದ್ಘಾಟಿಸಿದರು. ಕನ್ನಡ ಮತ್ತು  ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯ ಅತಿಥಿಯಾಗಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ  ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಕಸಾಪದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ದರು.

ರಾಜೇಶ್ ಭಟ್ ಪಣಿಯಾಡಿ ಕಾರ್ಯಕ್ರಮವನ್ನು ನಿರೂಪಿಸಿದರೆ, ಪೂರ್ಣಿಮಾ ಕೊಡವೂರು ವಂದಿಸಿದರು. 

Similar News