×
Ad

ಉಡುಪಿ: ವಿನಯಕುಮಾರ್ ಸೊರಕೆ ಆದಾಯ 51.36 ಲಕ್ಷ ರೂ., ಗೋಪಾಲ ಪೂಜಾರಿಯದು 70.23 ಲಕ್ಷ ರೂ.

Update: 2023-04-18 21:51 IST

ಉಡುಪಿ, ಎ.18: ಈ ಬಾರಿ ಕಾಪು ಮತ್ತು ಬೈಂದೂರು ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ ಹಾಗೂ ಕೆ.ಗೋಪಾಲ ಪೂಜಾರಿ ಅವರು ಕ್ರಮವಾಗಿ 51.36 ಲಕ್ಷ ಹಾಗೂ 70.23 ಲಕ್ಷ ರೂ. ಆದಾಯವನ್ನು ಹೊಂದಿದ್ದಾರೆ.

ಉಡುಪಿ ನಿವಾಸಿ 68ರ ಹರೆಯದ ವಿನಯಕುಮಾರ್ ಸೊರಕೆ ಅವರು 32 ಲಕ್ಷರೂ. ಚರಾಸ್ಥಿಯನ್ನು ಹೊಂದಿದ್ದರೆ, 19.36 ಲಕ್ಷರೂ. ಸ್ಥಿರಾಸ್ಥಿ ಅವರ ಬಳಿ ಇದೆ. ಇದರೊಂದಿಗೆ ಅವರು 22 ಲಕ್ಷ ರೂ.ಸಾಲವನ್ನು ಸಹ ಹೊಂದಿದ್ದಾರೆ ಎಂದು ಅವರು ಇಂದು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದಾವತ್‌ನಲ್ಲಿ ತಿಳಿಸಿದ್ದಾರೆ.

ಸೊರಕೆಗೆ ಹೋಲಿಸಿದರೆ ಅವರ ಪತ್ನಿ ದೀಕ್ಷಾ ವಿ.ಸೊರಕೆ ಹೆಚ್ಚು ಆದಾಯ ಹೊಂದಿದ್ದಾರೆ. ಅವರ ಒಟ್ಟು ಆದಾಯ 65.09 ಲಕ್ಷ ರೂ.ಆಗಿದೆ. ಪತ್ನಿ 49 ಲಕ್ಷ ರೂ. ಚರಾಸ್ಥಿಯನ್ನು ಹೊಂದಿದ್ದರೆ, 16.09 ಲಕ್ಷ ರೂ.ಸ್ಥಿರಾಸ್ಥಿಯೂ ಅವರ ಹೆಸರಿನಲ್ಲಿದೆ. ಆದರೆ ಅವರು ಹೊಂದಿರುವ ಸಾಲದ ಮೊತ್ತ 1.26 ಕೋಟಿ ರೂ.ಗಳಾಗಿವೆ.

ಸೊರಕೆ ಇನ್ನೋವಾ ಕಾರನ್ನು ಹೊಂದಿದ್ದರೆ, ಪತ್ನಿ ಬಳಿ 45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿವೆ. ಸೊರಕೆ ವಿರುದ್ಧ ಎರಡು ಪ್ರಕರಣಗಳು ಠಾಣೆಗಳಲ್ಲಿ ದಾಖಲಾಗಿರುವ ಬಗ್ಗೆ ಮಾಹಿತಿ ಅಫಿದಾವತ್‌ನಲ್ಲಿದೆ.

ಗೋಪಾಲ ಪೂಜಾರಿ: ಬೈಂದೂರಿನಲ್ಲಿ ಮೂರು ಬಾರಿಯ ಮಾಜಿ ಶಾಸಕರಾಗಿರುವ ಹೊಟೇಲ್ ಉದ್ಯಮ ನಡೆಸುವ ಗೋಪಾಲ ಪೂಜಾರಿ (67) ಅವರ ಆದಾಯ 70.23 ಲಕ್ಷ ರೂ.. ಇವೆಲ್ಲವೂ ಚರಾಸ್ಥಿಗಳೇ. ಅವರ ಬಳಿ ಯಾವುದೇ ಸ್ಥಿರಾಸ್ಥಿ ಇಲ್ಲ. ಆದರೆ ವಿವಿಧ ಬ್ಯಾಂಕುಗಳಲ್ಲಿ ಒಟ್ಟು 45.23 ಲಕ್ಷರೂ. ಸಾಲವನ್ನು ಹೊಂದಿದ್ದಾರೆ.

ಗೋಪಾಲ ಪೂಜಾರಿ ಅವರ ಪತ್ನಿ ಮಮತಾ ಪೂಜಾರಿ ಅವರಲ್ಲಿರುವ ಚರಾಸ್ಥಿಯ ಮೌಲ್ಯ 46.67 ಲಕ್ಷ ರೂ.ಗಳಾದರೆ, ಸ್ಥಿರಾಸ್ಥಿ ಮೌಲ್ಯ 85 ಲಕ್ಷ ರೂ.ಗಳೆಂದು ತಿಳಿಸಲಾಗಿದೆ. ಅಲ್ಲದೇ ಅವರು 35 ಲಕ್ಷ ರೂ.ಸಾಲವನ್ನೂ ಹೊಂದಿದ್ದಾರೆ.

ಗೋಪಾಲ ಪೂಜಾರಿ ಅವರು 7.80 ಲಕ್ಷ ರೂ. ನಗದು ಹೊಂದಿದ್ದರೆ, ಪತ್ನಿ ಬಳಿ 1.15 ಲಕ್ಷ ರೂ.ನಗದು ಇದೆ. ಮೂರು ಪ್ರಕರಣಗಳನ್ನು ಮಣಿಪಾಲ, ಬೆಂಗಳೂರು ಠಾಣೆಗಳಲ್ಲಿ  ಹೊಂದಿರುವ ಗೋಪಾಲ ಪೂಜಾರಿ ಬಳಿ ಫೋರ್ಡ್ ಹಾಗೂ ಇನ್ನೋವಾ ಕಾರುಗಳಿವೆ. ಆರು ಲಕ್ಷ ರೂ.ಮೌಲ್ಯದ 100ಗ್ರಾಂ ಚಿನ್ನವಿದೆ. ಪತ್ನಿ ಬಳಿ 45 ಲಕ್ಷ ರೂ. ಮೌಲ್ಯದ 750ಗ್ರಾಂ ಚಿನ್ನವಿದೆ.

Similar News