ಕಾರ್ಕಳ: ಉದಯ ಶೆಟ್ಟಿ ಆದಾಯ 38.43 ಕೋಟಿ ರೂ.
ಉಡುಪಿ, ಎ.18: ಇದೇ ಮೊದಲ ಬಾರಿಗೆ ಕಾರ್ಕಳದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ (49) ಅವರು ಒಟ್ಟು 38.43 ಕೋಟಿ ರೂ. ಘೋಷಿತ ಆದಾಯ ಹೊಂದಿದ್ದಾರೆ.
ಉದಯ ಕುಮಾರ್ ಶೆಟ್ಟಿ ಅವರು 31.83 ಕೋಟಿ ರೂ. ಚರಾಸ್ಥಿಯನ್ನು ಹೊಂದಿದ್ದರೆ, 6.60 ಕೋಟಿ ರೂ. ಸ್ಥಿರಾಸ್ಥಿಯನ್ನು ಸಹ ಹೊಂದಿದ್ದಾರೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದಾವತ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಅವರು 7.45 ಕೋಟಿ ರೂ. ಸಾಲವನ್ನು ಸಹ ಹೊಂದಿದ್ದಾರೆ.
ಉದಯ ಅವರ ಪತ್ನಿ ಅವರ ಒಟ್ಟು ಆದಾಯ 24.16 ಕೋಟಿ ರೂ. ಆಗಿದ್ದು, ಇದರಲ್ಲಿ ಚರಾಸ್ಥಿ ಮೌಲ್ಯ 12.28 ಕೋಟಿ ರೂ. ಆದರೆ, ಸ್ಥಿರಾಸ್ಥಿ ಮೌಲ್ಯ 11.88 ಕೋಟಿ ರೂ.ಗಳಾಗಿವೆ. ಇದರೊಂದಿಗೆ ಪತ್ನಿ ಹೆಸರಿನಲ್ಲಿ 2.94 ಕೋಟಿ ರೂ. ಸಾಲವೂ ಇದೆ. ಉದಯಶೆಟ್ಟಿ ಅವರ ಇಬ್ಬರು ಅವಲಂಬಿತ ಮಕ್ಕಳ ಹೆಸರಿನಲ್ಲಿ 45.29 ಲಕ್ಷ ಹಾಗೂ 31.96 ಲಕ್ಷ ರೂ. ಆದಾಯವನ್ನು ತೋರಿಸಲಾಗಿದೆ.
ಸರಕಾರದಿಂದ ಬಾಕಿ 26 ಕೋಟಿ ರೂ.: ಪಿಡಬ್ಲುಡಿಯಲ್ಲಿ ಕ್ಲಾಸ್ 1 ಗುತ್ತಿಗೆದಾರರಾಗಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾದ ಸಾಲದ ಮೊತ್ತ 26.15 ಕೋಟಿ ರೂ. ಎಂದು ತೋರಿಸಲಾಗಿದೆ.
ಈ ಸಾಲ 2013-14ನೇ ಸಾಲಿನಿಂದ 2019-20ರವೆರೆಗೆ ಉದಯ ಶೆಟ್ಟಿ ಅವರು ಮಾಡಿದ ಸರಕಾರದ ಕಾಮಗಾರಿಗೆ ನೀಡಬೇಕಾದ ಗುತ್ತಿಗೆ ಮೊತ್ತವಾಗಿದೆ. 2013-14ರಲ್ಲಿ 22.95ಲಕ್ಷರೂ., 2014-15ರಲ್ಲಿ 1.40 ಕೋಟಿ ರೂ., 2015-16ರಲ್ಲಿ 53.98ಲಕ್ಷ ರೂ., 2016-17ರಲ್ಲಿ 49.49 ಲಕ್ಷ ರೂ., 2017-18ರಲ್ಲಿ 14.54 ಕೋಟಿ ರೂ., 2018-19ರಲ್ಲಿ 8.72 ಕೋಟಿ ರೂ. ಹಾಗೂ 2019-20ರಲ್ಲಿ 21.96 ಲಕ್ಷ ರೂ. ಗುತ್ತಿಗೆ ಬಾಕಿ ಉದಯ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾಗಿದೆ. ಈ ಸಾಲವನ್ನು ವಿವಾದಿತ ಸಾಲ ಎಂದು ಕರೆಯಲಾಗಿದೆ.
ಪ್ರಮೋದ್ ಮುತಾಲಿಕ್ ಬಳಿ 2.63 ಲಕ್ಷ ರೂ.: ಕಾರ್ಕಳದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲಿರುವ ಪ್ರಮೋದ್ ಮುತಾಲಿಕ್ (68)ಅವರ ಬಳಿ ಕೇವಲ 2.63 ಲಕ್ಷ ರೂ. ಹಣವಿದೆ. ಇದರಲ್ಲಿ 2.5 ಲಕ್ಷ ಎನ್‌ಎಸ್‌ಸಿ ಬಾಂಡ್‌ನಲ್ಲಿದ್ದರೆ, ಬ್ಯಾಂಕಿನಲ್ಲಿ 3 ಸಾವಿರ ಹಾಗೂ ಕೈಯಲ್ಲಿ 10 ಸಾವಿರ ರೂ. ಹಣವಿದೆ. ಅವರ ಬಳಿ ಕಾರಿಲ್ಲ, ಬಂಗಾರವಿಲ್ಲ. ಅವರಿಗೆ ಪತ್ನಿ, ಮಕ್ಕಳೂ ಇಲ್ಲ. ಆದರೆ ಮುತಾಲಿಕ್ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿವೆ.