ಕಾಗೆ ಗೂಡಲ್ಲಿ ಒಡೆದ ಕೋಗಿಲೆಯ ಮೊಟ್ಟೆ

Update: 2023-04-19 03:54 GMT

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ರಾಜ್ಯ ಚುನಾವಣೆಯ ಫಲಿತಾಂಶದ ದಿಕ್ಕನ್ನೇ ಬದಲಿಸಲಿದೆ ಎನ್ನುವ ವಾತಾವರಣವನ್ನು ಸೃಷ್ಟಿಸಿದೆ. ಕಾಂಗ್ರೆಸ್ ಪಾಳಯ ಅದಾಗಲೇ ಚುನಾವಣೆಯನ್ನು ಗೆದ್ದೇ ಬಿಟ್ಟ ಸಂಭ್ರಮದಲ್ಲಿದೆ. ಲಿಂಗಾಯತ ಸಮುದಾಯದ ನಾಯಕರನ್ನು ಗರಿಷ್ಠ ಮಟ್ಟದಲ್ಲಿ ಬಳಸಿ ರಾಜ್ಯದಲ್ಲಿ ತನ್ನ ಬೇರುಗಳನ್ನು ಇಳಿಸಿಕೊಂಡ ಆರೆಸ್ಸೆಸ್ ಇದೀಗ ಪೂರ್ಣ ಪ್ರಮಾಣದಲ್ಲಿ ಬಿಜೆಪಿಯ ನಿಯಂತ್ರಣವನ್ನು ಕೈಗೆತ್ತಿಕೊಳ್ಳುವ ಆತುರದಲ್ಲಿದೆ. ಇದೊಂದು ರೀತಿಯಲ್ಲಿ, ಕಾಗೆ ಗೂಡಲ್ಲಿ ಕೋಗಿಲೆ ರೆಕ್ಕೆ ಬಿಚ್ಚಿದಂತೆ. ಲಿಂಗಾಯತರ ಗೂಡಲ್ಲಿ ಬ್ರಾಹ್ಮಣ್ಯ ಶಕ್ತಿ ಆರೆಸ್ಸೆಸ್ ಮೊಟ್ಟೆಯನ್ನಿಟ್ಟು ಕಾವು ಕೊಟ್ಟು ಇದೀಗ ಆ ಗೂಡನ್ನು ತೆರೆದು ತನ್ನ ನೆಲೆಯ ಕಡೆಗೆ ಹೊರಟಿದೆ. ಆದರೆ ಈ ವಾಸ್ತವವನ್ನು ಬಿಜೆಪಿಯೊಳಗಿರುವ ಲಿಂಗಾಯತ ನಾಯಕರು ಇನ್ನೂ ಅರ್ಥ ಮಾಡಿಕೊಂಡಂತಿಲ್ಲ. ತಮ್ಮ ನಿಜ ನೆಲೆಯನ್ನು ಮರೆತ ಅವರೆಲ್ಲರೂ ತಾವು ಆರೆಸ್ಸೆಸ್‌ನ ಗೂಡಿಂದ ಹೊರಹೊಮ್ಮಿದ ಅದರ ಮರಿಗಳು ಎಂದು ತಪ್ಪು ತಿಳಿದುಕೊಂಡಿದ್ದ್ದಾರೆ. ಯಾರು ಯಾರನ್ನು ಬಳಸಿಕೊಂಡಿದ್ದಾರೆ ಮತ್ತು ಯಾರು ಹೆಚ್ಚು ಕಳೆದುಕೊಂಡಿದ್ದಾರೆ ಎನ್ನುವುದರ ಅರಿವೂ ಅವರಿಗಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಲಿಂಗಾಯತ ನಾಯಕರೆಂದರೆ, ಆರೆಸ್ಸೆಸ್‌ನ ಗೂಡೊಳಗೆ ಒಡೆದ ಕೋಗಿಲೆಯ ಮೊಟ್ಟೆ. ಇದೀಗ ಆರೆಸ್ಸೆಸ್ ತಾನೇ ತಾನಾಗಿ ಅವುಗಳನ್ನು ಗೂಡಿನಿಂದ ಹೊರ ಹಾಕಿ, ಗೂಡಿನ ಯಜಮಾನ ಯಾರು ಎನ್ನುವುದನ್ನು ರಾಜ್ಯದ ಲಿಂಗಾಯತ ಸಮುದಾಯಕ್ಕೆ ಸ್ಪಷ್ಟ ಪಡಿಸುತ್ತಿದೆ. ಲಿಂಗಾಯತ ನಾಯಕರು ತಮ್ಮ ವೈಯಕ್ತಿಕ ಸ್ಥಾನ ಮತ್ತು ಮಾನಕ್ಕಾಗಿ ಬಸವಣ್ಣನ ಧರ್ಮ, ಚಿಂತನೆ, ಆಚಾರ, ವಿಚಾರ ಎಲ್ಲವನ್ನೂ ಆರೆಸ್ಸೆಸ್‌ನ ವೈದಿಕ ಚಿಂತನೆಗೆ ಬಲಿಕೊಟ್ಟರು. ಕೊನೆಗೂ ಪರಕೀಯರಾಗಿ ಗೂಡಿನಿಂದ ಹೊರತಳ್ಳಲ್ಪಟ್ಟ ಸ್ಥಿತಿಗೆ ಬಂದು ನಿಂತಿದ್ದಾರೆ. ಬಿಜೆಪಿ ಇದೀಗ ಸ್ಪಷ್ಟವಾಗಿ ಬ್ರಾಹ್ಮಣ-ಲಿಂಗಾಯತ ಎಂದು ಒಡೆದು ನಿಂತಿದೆ. ಆರೆಸ್ಸೆಸ್‌ನ್ನು ನಿಯಂತ್ರಿಸುತ್ತಿರುವ ವೈದಿಕ ಶಕ್ತಿ ಕೇಂದ್ರಗಳನ್ನು ಗುರುತಿಸಿ, ಅದನ್ನು ವಿರೋಧಿಸುವುದಕ್ಕೆ ಬಿಜೆಪಿಯೊಳಗಿರುವ ಲಿಂಗಾಯತ ನಾಯಕರಿಗೆ ಇದು ಸುಸಮಯವಾಗಿದೆ. ಆದರೆ ಬಿಜೆಪಿಯಿಂದ ಮುಖಭಂಗಕ್ಕೀಡಾಗಿ ಹೊರ ಬಂದು ಕಾಂಗ್ರೆಸ್ ಸೇರುತ್ತಿರುವ ಹಲವು ನಾಯಕರು 'ಕೆಲವು ವ್ಯಕ್ತಿಗಳ' ಕಾರಣದಿಂದ ನಾವು ಬಿಜೆಪಿಯಿಂದ ಹೊರ ಬೀಳುವಂತಾಗಿದೆ ಎಂದು ನಂಬಿದ್ದಾರೆ. ಒಂದು ಸಿದ್ಧಾಂತ ತಮ್ಮನ್ನು ತನಗೆ ಅಗತ್ಯವಿರುವಷ್ಟು ಬಳಸಿಕೊಂಡು ಹೊರ ಹಾಕಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಅದು ಸಾಧ್ಯವಾಗದವರೆಗೂ ಆರೆಸ್ಸೆಸ್ ತನ್ನ ಕೆಲಸದಲ್ಲಿ ಗೆದ್ದಿದೆ ಎಂದೇ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಮತ್ತು ಈ ಹಿನ್ನಡೆ ಆರೆಸ್ಸೆಸ್‌ನ ಪಾಲಿಗೆ ತಾತ್ಕಾಲಿಕವಾದುದು ಎಂದೂ ಭಾವಿಸಬೇಕಾಗುತ್ತದೆ.

ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ '' ನಮ್ಮ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದು ಅತ್ಯಂತ ಸಂತೋಷ ತಂದಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, 'ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷಾಂತರ ಮಾಡಿದ್ದೇನೆ' ಎಂದು ಈವರೆಗೆ ಶೆಟ್ಟರ್ ಎಲ್ಲೂ ಹೇಳಿಕೆಯನ್ನು ನೀಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಳಿಕ ಔಪಚಾರಿಕವಾಗಿಯಾದರೂ, 'ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವುಗಳ ಮೇಲೆ ನಂಬಿಕೆ ಬಂದಿದೆ. ಬಿಜೆಪಿ, ಆರೆಸ್ಸೆಸ್‌ನ ಸಿದ್ಧಾಂತಕ್ಕಿಂತ ಕಾಂಗ್ರೆಸ್ ಪಕ್ಷದ ಸಿದ್ಧಾಂತ ನನಗೆ ಇಷ್ಟವಾಗಿದೆ' ಎಂದು ಹೇಳುವುದು ಶೆಟ್ಟರ್ ಕರ್ತವ್ಯವಾಗಿತ್ತು. ಶೆಟ್ಟರ್ ಪರವಾಗಿ ಖರ್ಗೆ ಅವರೇ ಹೇಳಿಕೆ ನೀಡಬೇಕಾಯಿತು. ಕನಿಷ್ಠ 'ನನಗೆ ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತದ ಬಗ್ಗೆ ಜ್ಞಾನೋದಯವಾಗಿದೆ. ಆರೆಸ್ಸೆಸ್ ಸಿದ್ಧಾಂತದಿಂದ ರೋಸಿ ನಾನು ಪಕ್ಷ ತ್ಯಜಿಸಿದ್ದೇನೆ' ಎಂದು ಹೇಳುವ ಅವಕಾಶವೂ ಶೆಟ್ಟರ್‌ಗೆ ಇತ್ತು. ಆದರೆ ಆರೆಸ್ಸೆಸ್‌ನ ವಿರುದ್ಧವೂ ಅವರು ಈವರೆಗೆ ಹೇಳಿಕೆಯನ್ನು ನೀಡಿಲ್ಲ. ಬದಲಿಗೆ ''ನಾನು ಆರೆಸ್ಸೆಸ್ ಸಂಘಟನೆಯಿಂದ ಬಂದವನು'' ಎಂಬ ಹೇಳಿಕೆಯನ್ನು ಕಾಂಗ್ರೆಸ್ ಸೇರಿದ ಬಳಿಕವೂ, ಒಂದು ಹೆಗ್ಗಳಿಕೆಯ ರೂಪದಲ್ಲಿ ನೀಡಿದ್ದಾರೆ. ಅವರಿಗೆ ಈಗಲೂ ತಾನು ಆರೆಸ್ಸೆಸ್‌ನಿಂದ ಬಂದವನು ಎನ್ನುವುದಕ್ಕೆ ಮುಜುಗರವಾಗುತ್ತಿಲ್ಲ. ಅವರ ಒಟ್ಟು ಮಾತಿನಿಂದ ನಾವು ಅರ್ಥ ಮಾಡಿಕೊಳ್ಳಬೇಕಾದುದು, ಅವರು ಬಿಜೆಪಿಯನ್ನು ತೊರೆದಿದ್ದಾರೆಯೇ ಹೊರತು, ಆರೆಸ್ಸೆಸನ್ನಲ್ಲ.

ಕಾಗೆಯ ಗೂಡಲ್ಲಿ ಜನ್ಮ ತಳೆದರೂ, ಯಾವಾಗ ಕೋಗಿಲೆಯ ಮರಿಗೆ ತನ್ನತನದ ಅರಿವಾಗುತ್ತದೆಯೋ ಆಗಲೇ ಆ ಗೂಡಿನಿಂದ ಹಾರಿ ಬಿಡುತ್ತದೆ. 'ಕಾಗೆ ಮತ್ತು ಕೋಗಿಲೆ'ಗಿರುವ ವ್ಯತ್ಯಾಸ ಗೊತ್ತಾದ ಬಳಿಕ ಅದು ಎಂದಿಗೂ ಗೂಡಿಗೆ ಮರಳುವುದಿಲ್ಲ. ಶೆಟ್ಟರ್ ಎನ್ನುವ ಕೋಗಿಲೆ ತಾನು ನಿಜಕ್ಕೂ ಯಾರು ಎನ್ನುವ ಜ್ಞಾನೋದಯದಿಂದಾಗಿ ಗೂಡಿನಿಂದ ಹೊರ ಹಾರಿರುವುದಲ್ಲ. ಕಾಗೆಗಳು ಸೇರಿ ಹೊರದಬ್ಬಿರುವುದರಿಂದ ಗೂಡಿನಿಂದ ಹೊರ ಬಿದ್ದಿದೆ. ಇಷ್ಟಕ್ಕೂ ಆ ಕಾಗೆಗಳು ಯಾಕೆ ತನ್ನನ್ನು ಗೂಡಿನಿಂದ ಹೊರ ಹಾಕಿವೆ ಎನ್ನುವುದರ ಬಗ್ಗೆಯೂ ಅವರಿಗೆ ಸ್ಪಷ್ಟತೆಯಿದ್ದಂತಿಲ್ಲ. ''ಬಿಜೆಪಿ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದೆ. ಕೆಲವು ವ್ಯಕ್ತಿಗಳು ನನ್ನ ವಿರುದ್ಧ ಸಂಚು ನಡೆಸಿದ್ದಾರೆ'' ಎಂದು ಶೆಟ್ಟರ್ ಅಳುತ್ತಿದ್ದಾರೆ. ಅವರಿಗೆ ವಂಚಿಸಿರುವುದು ಕೆಲವು ವ್ಯಕ್ತಿಗಳಲ್ಲ, ಆರೆಸ್ಸೆಸ್ ಎನ್ನುವ ಸಿದ್ಧಾಂತ ಎನ್ನುವುದನ್ನು ಅವರು ಎಲ್ಲಿಯವರೆಗೆ ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವರು ಬಿಜೆಪಿ ತೊರೆದರೂ, ಮಾನಸಿಕವಾಗಿ ಆರೆಸ್ಸೆಸ್ ಸಿದ್ಧಾಂತದ ಜೀತದಾಳುವಾಗಿಯೇ ಕಾಂಗ್ರೆಸ್‌ನೊಳಗಿರುತ್ತಾರೆ. ಶೆಟ್ಟರ್ ಮತ್ತು ಅವರ ಸಹೋದ್ಯೋಗಿಗಳ ಕಾಂಗ್ರೆಸ್ ಸೇರ್ಪಡೆಯಿಂದ ಚುನಾವಣೆಯಲ್ಲಿ ತಕ್ಷಣಕ್ಕೆ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಲಾಭವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬಿಜೆಪಿಯ ಹಳಸಿದ ಅನ್ನದಿಂದ ಕಾಂಗ್ರೆಸ್ ಚಿತ್ರಾನ್ನ ಮಾಡಿ ತನ್ನ ಸದ್ಯದ ರಾವಣ ಹಸಿವೆಯಿಂದ ಪಾರಾಗುವ ಪ್ರಯತ್ನವನ್ನು ಮಾಡಬಹುದು. ಸದ್ಯಕ್ಕೆ ಕಾಂಗ್ರೆಸ್ ಅದೇ ಪ್ರಯತ್ನದಲ್ಲಿದೆ. ಆದರೆ ದೂರಗಾಮಿ ಪರಿಣಾಮದ ಬಗ್ಗೆ ಹೇಳುವುದಾದರೆ ಅದರ ಆರೋಗ್ಯ ಇನ್ನಷ್ಟು ಹದಗೆಡಲಿದೆ. ಯಾಕೆಂದರೆ, ಮಾನಸಿಕವಾಗಿ ಇನ್ನೂ ಆರೆಸ್ಸೆಸ್‌ನ ಮೇಲರಿಮೆಯಿಂದ ಹೊರ ಬರದ, ಬಿಜೆಪಿಯ ಅಥವಾ ಆರೆಸ್ಸೆಸ್‌ನೊಳಗಿರುವ ಕೆಲವು ವ್ಯಕ್ತಿಗಳಷ್ಟೇ ನಮ್ಮ ಶತ್ರುಗಳು ಎಂದು ನಂಬಿರುವ ಈ ನಾಯಕರು ತಕ್ಷಣದ ಅವಮಾನ ಮತ್ತು ಅನ್ಯಾಯಕ್ಕೆ ನೊಂದು ಕಾಂಗ್ರೆಸ್ ಸೇರಿದ್ದಾರೆ. ಇವರು ಆರೆಸ್ಸೆಸ್‌ನ ವೈದಿಕ ಚಿಂತನೆಗಳ ಬಗ್ಗೆ ಇನ್ನೂ ಗೌರವವನ್ನು ಉಳಿಸಿಕೊಂಡಿದ್ದಾರೆ ಮಾತ್ರವಲ್ಲ, ಕಾಂಗ್ರೆಸ್‌ನ ಜಾತ್ಯತೀತ ಚಿಂತನೆಗಳ ಕುರಿತಂತೆ ಕೀಳರಿಮೆಯನ್ನೂ ಹೊಂದಿದ್ದಾರೆ.

ಲಿಂಗಾಯತ ಮತ್ತು ಬಸವ ತತ್ವದ ಬೆಳಕಿನ ದಾರಿಯಲ್ಲಿ ನಡೆಯುವುದೂ ಅವರಿಗೆ ಬೇಕಾಗಿಲ್ಲ. ಅವರ ಮುಂದಿರುವುದು, ತಮಗೆ ವಂಚಿಸಿದ 'ಕೆಲವು ವ್ಯಕ್ತಿಗಳಿಗೆ' ಪಾಠ ಕಲಿಸಿ, ಕೇಂದ್ರದ ಬಿಜೆಪಿಯ ವರಿಷ್ಠರಿಗೆ ತಮ್ಮ 'ಅಗತ್ಯ'ವನ್ನು ಸಾಬೀತು ಪಡಿಸುವುದು. 'ಅಮಿತ್ ಶಾ ಮತ್ತು ಮೋದಿಯ ಕುರಿತಂತೆ ಈ ನಾಯಕರು ಯಾವ ಅಭಿಪ್ರಾಯವನ್ನು ಹೊಂದಿದ್ದಾರೆ? ಕಾಂಗ್ರೆಸ್‌ನ ನಾಯಕರಾದ ರಾಹುಲ್ ಗಾಂಧಿ ಮತ್ತು ಖರ್ಗೆಯವರು ಈ ವರಿಷ್ಠರ ವಿರುದ್ಧ ಮಾಡುವ ಟೀಕೆಗಳನ್ನು ಇವರು ಎಷ್ಟರಮಟ್ಟಿಗೆ ಒಪ್ಪುತ್ತಾರೆ' ಎನ್ನುವುದು ಸ್ಪಷ್ಟವಾಗದೆ ಶೆಟ್ಟರ್ ಮೊದಲಾದ ನಾಯಕರ ಕಾಂಗ್ರೆಸ್ ಪ್ರವೇಶವನ್ನು ಸಂಭ್ರಮಿಸುವುದರಲ್ಲಿ ಯಾವ ಅರ್ಥವೂ ಇಲ್ಲ. 'ಹೊಸ ನೀರು ಹಳೆ ನೀರನ್ನು ಕೊಚ್ಚಿ ಕೊಂಡು ಹೋಯಿತು' ಎನ್ನುವ ಮಾತಿದೆ. ಮುಂದಿನ ದಿನಗಳಲ್ಲಿ, ಬಂದವರು ಇರುವ ಹಳೆ ಕಾಂಗ್ರೆಸ್‌ನ ಜೊತೆಗೆ ಮತ್ತೆ ಬಿಜೆಪಿ ಸೇರಿದರೆ ಅದರಲ್ಲಿ ಅಚ್ಚರಿ ಪಡಬೇಕಾದುದೇನೂ ಇಲ್ಲ.

Similar News