ಸರಕಾರಿ ನೌಕರಿ ಮತ್ತು ನಕಲಿ ಪ್ರಮಾಣ ಪತ್ರಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವರ್ಷದಿಂದ ವರ್ಷಕ್ಕೆ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಈಗಂತೂ ಪದವಿಗಳ ಮಾರಾಟ ಮತ್ತು ಖರೀದಿ ವ್ಯವಹಾರ ವ್ಯಾಪಕವಾಗಿ ನಡೆಯುತ್ತಿದೆ. ಹಣಕ್ಕಾಗಿ ನಕಲಿ ಪದವಿಗಳನ್ನು ಒದಗಿಸುವ ಜಾಲ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಕಡೆ ಸಕ್ರಿಯವಾಗಿದೆ. ಸರಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿ ನಕಲಿ ಪ್ರಮಾಣಪತ್ರಗಳನ್ನು ಹಾಡ ಹಗಲೇ ಮಾರಾಟ ಮಾಡಲಾಗುತ್ತಿದೆ ಎಂದು ದೂರುಗಳು ಸಂಬಂಧಿಸಿದ ಇಲಾಖೆಗಳಿಗೆ ಬರುತ್ತಲೇ ಇವೆ. ಆದರೂ ನಿಲ್ಲಿಸಲು ಆಗುತ್ತಿಲ್ಲ. ನಮ್ಮ ಕರ್ನಾಟಕದಲ್ಲೇ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಪ್ರಮಾಣ ಪತ್ರಗಳನ್ನು ಹಣ ಪಡೆದು ವಿತರಿಸಿದ ಲಕ್ಷಾಂತರ ರೂಪಾಯಿಗಳ ಹಗರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟು ಆ ಮೂಲಕ ಜನರನ್ನು ನಂಬಿಸಿ ನಕಲಿ ಪ್ರಮಾಣ ಪತ್ರಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬುದು ಜನಜನಿತವಾದ ಸಂಗತಿಯಾಗಿದೆ. ಈ ನಕಲಿ ಪ್ರಮಾಣ ಪತ್ರವನ್ನೇ ಉಪಯೋಗಿಸಿಕೊಂಡು ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿ ನೌಕರಿ ಪಡೆದಿರುವವರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.
ನಕಲಿ ಪ್ರಮಾಣ ಪತ್ರಗಳ ಇಂಥ ಹಾವಳಿಯಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದ ದುರವಸ್ಥೆ ಬಯಲಿಗೆ ಬಂದಂತಾಗಿದೆ. ಸರಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಅತಿಥಿ ಉಪನ್ಯಾಸಕರ ಪದವಿ ಪ್ರಮಾಣ ಪತ್ರಗಳು ಕೂಡ ನಕಲಿ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಈ ನಕಲಿ ಪ್ರಮಾಣ ಪತ್ರಗಳನ್ನು ದೃಢೀಕರಿಸುವ ದಾಖಲೆಗಳು ಕೂಡ ನಕಲಿ ಎಂಬ ವರದಿ ಶೈಕ್ಷಣಿಕ ಕ್ಷೇತ್ರದ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಮಧ್ಯೆ ಕಾಲೇಜು ಶಿಕ್ಷಣ ಇಲಾಖೆ ತಡವಾಗಿಯಾದರೂ ಇದನ್ನು ಸರಿಪಡಿಸಲು ಹೊರಟಿರುವುದು ಸರಿಯಾದರೂ ಅದರ ಕ್ರಮ ತುಂಬಾ ಗೊಂದಲಕಾರಿಯಾಗಿದೆ. ನಕಲಿ ಪ್ರಮಾಣ ಪತ್ರಗಳ ನೈಜತೆಯನ್ನು ಪರೀಕ್ಷಿಸುವ ಕಾಲೇಜು ಶಿಕ್ಷಣ ಇಲಾಖೆಯ ಕ್ರಮ ಒಳ್ಳೆಯದು. ಆದರೆ ಅದಕ್ಕೆ ತಗಲುವ ಖರ್ಚು, ವೆಚ್ಚಗಳನ್ನು ಅತಿಥಿ ಉಪನ್ಯಾಸಕರೇ ಭರಿಸಬೇಕೆಂದು ಸದರಿ ಇಲಾಖೆ ಸೂಚಿಸಿರುವುದು ಮಾತ್ರ ಸೂಕ್ತವಲ್ಲ.ಅತ್ಯಂತ ಕಡಿಮೆ ಸಂಬಳದಲ್ಲಿ ಅಭದ್ರ ಸ್ಥಿತಿಯಲ್ಲಿ ಬದುಕುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಪ್ರಮಾಣ ಪತ್ರಗಳು ನಕಲಿಯಲ್ಲ ಎಂದು ಸಾಬೀತು ಪಡಿಸಲು ತಾವೇ ಖರ್ಚು ಮಾಡಬೇಕೆಂದು ಹೇಳುವುದು ಅಮಾನವೀಯ ಕ್ರಮವಾಗಿದೆ.
ತಮ್ಮ ಪ್ರಮಾಣ ಪತ್ರಗಳ ನೈಜತೆಯನ್ನು ಸಾಬೀತುಪಡಿಸಲು ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ಪದವಿಯ ಅಂಕಪಟ್ಟಿ, ಘಟಿಕೋತ್ಸವದ ಪ್ರಮಾಣ ಪತ್ರ, ಪಿ.ಎಚ್‌ಡಿ., ಎಂ.ಫಿಲ್. ಮತ್ತಿತರ ಪ್ರಮಾಣ ಪತ್ರಗಳನ್ನು ಒದಗಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳು ದುಬಾರಿ ಶುಲ್ಕವನ್ನು ನಿಗದಿ ಪಡಿಸಿವೆ. ಇದು ಈಗಾಗಲೇ ಹಣಕಾಸಿನ ತೊಂದರೆಯಲ್ಲಿರುವ ಅತಿಥಿ ಉಪನ್ಯಾಸಕರ ಮೇಲೆ ಮತ್ತೊಂದು ಹೊರೆಯನ್ನು ಹೊರಿಸಿದಂತಾಗಿದೆ.
ಅತಿಥಿ ಉಪನ್ಯಾಸಕರ ಶೈಕ್ಷಣಿಕ ದಾಖಲೆಗಳ ನೈಜತೆಯನ್ನು ಖಚಿತಪಡಿಸಲು ಕಾಲೇಜು ಶಿಕ್ಷಣ ಇಲಾಖೆ 2017ರಲ್ಲಿಯೂ ಕ್ರಮವನ್ನು ಕೈಗೊಂಡಿತ್ತು. ಆಗ ಸದರಿ ಇಲಾಖೆಯೇ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಿತ್ತು. ಆಗ 23 ಅಭ್ಯರ್ಥಿಗಳ ಪಿಎಚ್‌ಡಿ ಪ್ರಮಾಣ ಪತ್ರಗಳು ನಕಲಿ ಎಂದು ಬಯಲಿಗೆ ಬಂದಿತ್ತು. ಅವರ ಮೇಲೆ ಕಾಲೇಜು ಶಿಕ್ಷಣ ಇಲಾಖೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿತ್ತು. ಆಗಿನಂತೆ ಈಗಲೂ ಕೂಡ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದಾಗಿದೆ. ಆದರೆ ಪ್ರಮಾಣ ಪತ್ರಗಳ ಅಸಲೀತನವನ್ನು ಅಭ್ಯರ್ಥಿಗಳೇ ಸಾಬೀತುಪಡಿಸುವ ಪ್ರಕ್ರಿಯೆಯಲ್ಲಿ ನಕಲಿ ಪ್ರಮಾಣ ಪತ್ರಗಳನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. ಅಭ್ಯರ್ಥಿಗಳು ಒದಗಿಸುವ ಪ್ರಮಾಣ ಪತ್ರಗಳು ಅಸಲಿಯೋ ನಕಲಿಯೋ ಎಂಬುದನ್ನು ಖಚಿತಪಡಿಸುವ ಅಧಿಕಾರ ಪ್ರಾಂಶುಪಾಲರಿಗೆ ಇಲ್ಲ. ಹೀಗಾಗಿ ತಪ್ಪು ಮಾಡಿರುವ ಅಭ್ಯರ್ಥಿಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸಲು ಆಗುವುದಿಲ್ಲ.
ಕಾಲೇಜು ಶಿಕ್ಷಣ ಇಲಾಖೆಯೇ ಪ್ರಮಾಣ ಪತ್ರಗಳ ಅಸಲೀತನವನ್ನು ಪರಿಶೀಲನೆ ಮಾಡುವ ಕೆಲಸವನ್ನು ಕೈಗೆತ್ತಿಕೊಂಡಿದ್ದರೆ ನಕಲಿ ಪ್ರಮಾಣ ಪತ್ರವನ್ನು ಸಲ್ಲಿಸಿದವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲು ಸಾಧ್ಯವಿತ್ತು. ಇಂಥ ಅವಕಾಶವನ್ನು ಇಲಾಖೆ ಬಿಟ್ಟುಕೊಟ್ಟಿರುವುದು ಸರಿಯಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಈ ಲೋಪದಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ತುಂಬಿ ತುಳುಕುತ್ತಿರುವ ಹೊಲಸು ಮುಂದುವರಿಯಲು ಮತ್ತಷ್ಟು ಅವಕಾಶ ನೀಡಿದಂತಾಗಿದೆ.
ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ನೌಕರಿ ಗಿಟ್ಟಿಸಿಕೊಳ್ಳುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಶೈಕ್ಷಣಿಕ ಕ್ಷೇತ್ರದಲ್ಲಿ ಇಂಥವರು ತುಂಬಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕಲ್ಲು ಚಪ್ಪಡಿ ಎಳೆದಂತಾಗುವುದಿಲ್ಲವೇ? ಈಗಾಗಲೇ ಬೇರು ಬಿಟ್ಟಿರುವ ಈ ಭ್ರಷ್ಟಾಚಾರವನ್ನು ತೊಲಗಿಸುವುದು ಸುಲಭದ ಸಂಗತಿಯಲ್ಲ.
ಈ ನಕಲಿ ಪ್ರಮಾಣ ಪತ್ರದಂತೆ ಗೌರವ ಡಾಕ್ಟರೇಟ್‌ಗಳ ಬಹುದೊಡ್ಡ ಹಗರಣವಿದೆ. ಸಾಮಾಜಿಕವಾಗಿ ಅಸಾಧಾರಣ ಸಾಧನೆಯನ್ನು ಮಾಡಿದವರಿಗೆ ಈ ಹಿಂದೆ ಅಪರೂಪದ ಸಂದರ್ಭಗಳಲ್ಲಿ ಗೌರವ ಕೊಡಲಾಗುತ್ತಿತ್ತು. ಕನ್ನಡದ ವರ ನಟ ರಾಜಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಹಿಂದೆ ಗೌರವ ಡಾಕ್ಟರೇಟ್ ನೀಡಿತ್ತು. ಆದರೆ ರಾಜಕುಮಾರ್ ಅವರು ತಮ್ಮ ಹೆಸರಿನ ಮುಂದೆ ಇದನ್ನು ಬಳಸುತ್ತಿರಲಿಲ್ಲ. ಈಗಂತೂ ರಿಯಲ್ ಎಸ್ಟೇಟ್ ಮಾಫಿಯಾಗಳು, ಅಕ್ರಮ ಗಣಿಗಾರಿಕೆಯ ಖದೀಮರು, ಸಕ್ಕರೆ ಕಾರ್ಖಾನೆಗಳ ಮಾಲಕರು ಹಣ ಕೊಟ್ಟು ಗೌರವ ಡಾಕ್ಟರೇಟ್ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಇವೆ. ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪದವಿಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆ ಮಾಲಕರೊಬ್ಬರು ಈ ವಿಶ್ವವಿದ್ಯಾನಿಲಯದ ‘ನಾಡೋಜ’ ಪದವಿಯನ್ನು ಹೊಡೆದುಕೊಂಡು ವಿಕ್ಟರಿ ಚಿಹ್ನೆ ತೋರಿಸಿದ್ದರು. ಇದು ಈ ನಾಡಿನ ದುರಂತ. ಈಗಂತೂ ಊರಿಗೊಂದು ಯುನಿವರ್ಸಿಟಿಗಳಾಗಿವೆ. ವಿದ್ಯಾರ್ಥಿಗಳಿಲ್ಲದಿದ್ದರೂ ಯುನಿವರ್ಸಿಟಿಗಳಿಗೇನೂ ಕೊರತೆ ಇಲ್ಲ. ತಮ್ಮ ಪ್ರದೇಶದ ಪ್ರಭಾವಿ ರಾಜಕಾರಣಿಗಳು, ಮಠಾಧೀಶರು ಹಾಗೂ ಉದ್ಯಮಿಗಳು, ಸೇರಿದಂತೆ ಕಂಡ ಕಂಡವರಿಗೆಲ್ಲ ಗೌರವ ಡಾಕ್ಟರೇಟ್ ಪದವಿ ಕೊಡುವುದೇ ಈ ವಿಶ್ವವಿದ್ಯಾನಿಲಯಗಳ ಕೆಲಸವಾಗಿದೆ. ಕೊಡುವವರಂತೂ ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ. ತೆಗೆದುಕೊಳ್ಳುವವರಿಗಾದರೂ ಮಾನ, ಮರ್ಯಾದೆ ಬೇಡವೇ? ಇದು ಜಾಗತೀಕರಣದ ಶಕೆ ಆರಂಭವಾದ ನಂತರ ನಮ್ಮ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳು ತಲುಪಿರುವ ಶೋಚನೀಯ ಪರಿಸ್ಥಿತಿ. ಇದನ್ನು ಸರಿಪಡಿಸುವುದು ಯಾವಾಗ? ಸರಿ ಪಡಿಸುವವರು ಯಾರು? ಈ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.