ದೇಶಾದ್ಯಂತ ಮುಂದುವರಿದ ಉಷ್ಣಮಾರುತ: 40 ಡಿಗ್ರಿ ಸೆಲ್ಷಿಯಸ್‌ಗೂ ಹೆಚ್ಚು ತಾಪಮಾನ
ಹೊಸದಿಲ್ಲಿ: ದಿಲ್ಲಿ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಉಷ್ಣ ಮಾರುತ ಸ್ಥಿತಿ ಮುಂದುವರಿದಿದ್ದು, ತಾಪಮಾನವು 40-44 ಡಿಗ್ರಿ ಸೆಲ್ಷಿಯಸ್‌ಗೂ ಹೆಚ್ಚಿದೆ. ಉತ್ತರ ಪ್ರದೇಶದಲ್ಲಿನ ಹಮೀರ್‌ಪುರ್ ಹಾಗೂ ಪ್ರಯಾಗ್ ರಾಜ್‌ನಲ್ಲಿ 44.2 ಡಿಗ್ರಿ ಸೆಲ್ಷಿಯನ್ ತಾಪಮಾನವಿದ್ದು, ಅಲ್ಲಿನ ವಾತಾವರಣ ಅಕ್ಷರಶಃ ಕುದಿಯುತ್ತಿದೆ. ಒಡಿಶಾ ರಾಜ್ಯದಲ್ಲಿನ ಉಷ್ಣ ಮಾರುತ ಸ್ಥಿತಿಯನ್ನು ಪರಿಗಣಿಸಿ, ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಎಪ್ರಿಲ್ 19-20ರವರೆಗೆ ಮುಚ್ಚಲಾಗಿದೆ. ಭುವನೇಶ್ವರದಲ್ಲಿನ ಭಾರತೀಯ ಹವಾಮಾನ ಇಲಾಖೆಯು ರಾಜ್ಯದಲ್ಲಿ ಒಟ್ಟು ಎರಡು ಮೂರು ದಿನ ಉಷ್ಣ ಮಾರುತ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ ಎಂದು news.abplive.com ವರದಿ ಮಾಡಿದೆ.
ಮಂಗಳವಾರ ದಿಲ್ಲಿಯ ಹಲವಾರು ಭಾಗಗಳಲ್ಲಿ ಸತತ ಮೂರನೆಯ ದಿನವೂ ಉಷ್ಣ ಮಾರುತ ಸ್ಥಿತಿ ಮುಂದುವರಿದಿದೆ. ಕೆಲವು ಹವಾಮಾನ ಕೇಂದ್ರಗಳಲ್ಲಿ ಸಾಧಾರಣಕ್ಕಿಂತ ಕನಿಷ್ಠ ಪಕ್ಷ ಐದು ಡಿಗ್ರಿ ಸೆಲ್ಷಿಯಸ್‌ನಷ್ಟು ಗರಿಷ್ಠ ಪ್ರಮಾಣದ ಉಷ್ಞಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬುಧವಾರ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇರುವುದರಿಂದ ಉಷ್ಞಾಂಶದಿಂದ ಕೊಂಚ ರಿಯಾಯಿತಿ ದೊರೆಯಬಹುದು ಎಂದು ಹೇಳಿದೆ.
ಹವಾಮಾನ ಇಲಾಖೆಯು ಬಿಹಾರದಲ್ಲಿ ಕೇಸರಿ ಮುನ್ಸೂಚನೆ ನೀಡಿದ್ದು, ಪಾಟ್ನಾ, ಬಂಕಾ, ಜಮುಯ್, ನವಾಡಾ, ಔರಂಗಾಬಾದ್, ಸುಪೌಲ್ ಹಾಗೂ ಇನ್ನೂ ಹಲವಾರು ಜಿಲ್ಲೆಗಳಲ್ಲಿ ತೀವ್ರ ಪ್ರಮಾಣದ ಉಷ್ಣ ಮಾರುತ ಸ್ಥಿತಿ ಇರಲಿದೆ ಎಂದು ಹೇಳಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಬೇಗುಸರಾಯ್, ನಳಂದ, ಗಯಾ, ಅರ್ವಲ್, ಭೋಜ್‌ಪುರ್, ರೊಹ್ತಾಸ್, ಬಕ್ಸರ್, ಖಗಾರಿಯಾ ಹಾಗೂ ಮುಂಗರ್‌ನಲ್ಲಿ ಹಳದಿ ಮುನ್ಸೂಚನೆ ನೀಡಲಾಗಿದೆ.
ಮಂಗಳವಾರ ಗಂಗಾ ನದಿ ಪಾತ್ರದ ಪಶ್ಚಿಮ ಬಂಗಾಳವು ಅಧಿಕ ಉಷ್ಣಾಂಶದಿಂದ ತತ್ತರಿಸಿ ಹೋಗಿತ್ತು. ಹಲವಾರು ಭಾಗಗಳಲ್ಲಿ 40 ಡಿಗ್ರಿ ಸೆಲ್ಷಿಯಸ್ ಮೀರಿ ತಾಪಮಾನವಿದ್ದು, ಪಶ್ಚಿಮ ಜಿಲ್ಲೆಗಳಲ್ಲಿ ಉಷ್ಣ ಮಾರುತ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಂಗಾ ನದಿ ತೀರದ ಪಶ್ಚಿಮ ಬಂಗಾಳದಲ್ಲಿನ ಪ್ರತ್ಯೇಕಗೊಂಡ ಭಾಗಗಳಲ್ಲಿ ಇನ್ನು ಎರಡು ದಿನದ ಮಟ್ಟಿದೆ ಉಷ್ಣ ಮಾರುತ ಸ್ಥಿತಿ ಮುಂದುವರಿಯಲಿದೆ. ಬಂಕುರಾದಲ್ಲಿ ದಿನದಲ್ಲಿನ ಅತ್ಯಧಿಕ ಉಷ್ಣಾಂಶ ದಾಖಲಾಗಿದ್ದು, 44.1 ಡಿಗ್ರಿ ಸೆಲ್ಷಿಯಸ್‌ನಷ್ಟಿದ್ದರೆ, ಪಶ್ಚಿಮ ಬರ್ಧಮಾನ್ ಜಿಲ್ಲೆಯ ಪನಗಢ್ ವಾಯು ಪಡೆ ನಿಲ್ದಾಣ ಪ್ರದೇಶದಲ್ಲಿ 43.4 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗೊದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ, ಪಶ್ಚಿಮ ಬಂಗಾಳ ಸರ್ಕಾರವು ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ಖಾತ್ರಿಪಡಿಸಿಕೊಳ್ಳಲು ಉಷ್ಣ ಮಾರುತ ಸ್ಥಿತಿಯ ಮೇಲೆ ಕಣ್ಣಿಡುವಂತೆ ಎಲ್ಲ ಜಿಲ್ಲೆಗಳಲ್ಲಿನ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ. ಈ ಸಂಬಂಧ ವಿಧಾನಸಭಾ ಕಾರ್ಯಾಲಯದಲ್ಲಿ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದ್ದ ರಾಜ್ಯ ಮುಖ್ಯ ಕಾರ್ಯದರ್ಶಿ ಎಚ್.ಕೆ.ದ್ವಿವೇದಿ, ಪಂಚಾಯತ್ ಚುನಾವಣೆಗೂ ರಾಜ್ಯದಲ್ಲಿನ ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಕೆ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ಸಾರ್ವಜನಿಕ ಆರೋಗ್ಯ ತಂತ್ರಜ್ಞಾನ ಇಲಾಖೆಗೆ ನಿರ್ದೇಶನ ನೀಡಿದರು.