ಸುಡಾನ್‌ನಲ್ಲಿ ಸಿಲುಕಿದ ಭಾರತೀಯರು: ಸ್ಥಳೀಯವಾಗಿ ನೆರವು ನೀಡುವ ಭರವಸೆ ನೀಡಿದ ಸೌದಿ, ಯುಎಇ
ಹೊಸದಿಲ್ಲಿ: ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿನ ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಾತ್ರಿಗೊಳಿಸಲು ಭಾರತವು ಅಮೆರಿಕಾ, ಬ್ರಿಟನ್, ಸೌದಿ ಅರೇಬಿಯಾ, ಯುಎಇಯೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಸೌದಿ ಅರೇಬಿಯಾ ಹಾಗೂ ಯುಎಇ ರಾಷ್ಟ್ರಗಳು ಸ್ಥಳೀಯ ನೆರವು ನೀಡುವ ಭರವಸೆ ನೀಡಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಸುಡಾನ್‌ನಲ್ಲಿನ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ಈ ಹಂತದಲ್ಲಿ ಜನರನ್ನು ಸಾಗಿಸುವುದು ಅಪಾಯಕಾರಿಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ದೇಶದ ಸೇನಾ ಪಡೆ ಹಾಗೂ ಅರೆ ಸೇನಾ ಗುಂಪಿನ ನಡುವೆ ನಡೆಯುತ್ತಿರುವ ಭೀಕರ ಕಾಳಗಕ್ಕೆ ಕಳೆದ ಆರು ದಿನಗಳಿಂದ ಸುಡಾನ್ ಸಾಕ್ಷಿಯಾಗಿದ್ದು, ಈ ಕಾಳಗದಲ್ಲಿ ಸುಮಾರು 200 ಮಂದಿ ಮೃತಪಟ್ಟಿದ್ದಾರೆ.
ಅಮೆರಿಕಾವನ್ನು ಒಳಗೊಂಡಿರುವ ಜಿ-7 ಗುಂಪಿನ ವಿದೇಶಾಂಗ ಸಚಿವರು ಮಂಗಳವಾರ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಕಾಳಗದಲ್ಲಿ ತೊಡಗಿರುವ ಉಭಯ ಗುಂಪುಗಳನ್ನು ಆಗ್ರಹಿಸಿದೆ. ಈ ನಡುವೆ ಖಾರ್ಟೌಮ್‌ನಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿ ಬರುತ್ತಿದ್ದು, ಯೋಧರು ಶಿರಸ್ತ್ರಾಣ ಹಾಗೂ ಸಮವಸ್ತ್ರಗಳನ್ನು ಧರಿಸಿ ಬೀದಿಗಳನ್ನು ಸುತ್ತುತ್ತಿದ್ದಾರೆ.
ಸೋಮವಾರ ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹೊಸ ಮುನ್ನೆಚ್ಚರಿಕೆಯನ್ನು ಬಿಡುಗಡೆ ಮಾಡಿ, ಭಾರತೀಯರು ತಮ್ಮ ನಿವಾಸಗಳನ್ನು ತೊರೆಯಕೂಡದು ಹಾಗೂ ಸಂಯಮದಿಂದಿರಬೇಕು ಎಂದು ಆಗ್ರಹಿಸಿದೆ.
ಇದಕ್ಕೂ ಮುನ್ನ ಖಾರ್ಟೌಮ್‌ನಲ್ಲಿ ಗುಂಡೇಟು ತಗುಲಿ ಓರ್ವ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ ಎಂದು ರವಿವಾರ ಭಾರತೀಯ ರಾಯಭಾರ ಕಚೇರಿಯು ಪ್ರಕಟಿಸಿತ್ತು.
ಸದ್ಯ ಸುಡಾನ್‌ನಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಹಾಗೂ ನೆರವು ಒದಗಿಸಲು ವಿದೇಶಾಂಗ ವ್ಯವಹಾರಗಳ ಇಲಾಖೆಯು ಈಗಾಗಲೇ 24x7 ಹೊತ್ತು ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಇದನ್ನೂ ಓದಿ: ನೀವು ಬ್ಯುಸಿ ಇದ್ರೆ, ನಮ್ಮವರನ್ನು ಕರೆ ತರುವ ವ್ಯಕ್ತಿಯನ್ನು ಸಂಪರ್ಕಿಸಿಕೊಡಿ: ಜೈಶಂಕರ್ ಗೆ ಸಿದ್ದರಾಮಯ್ಯ ತಿರುಗೇಟು