×
Ad

ಮಹಾರಾಷ್ಟ್ರದಲ್ಲಿ ಮಧ್ಯಾಹ್ನ 12ರಿಂದ ಸಂಜೆ 5ರ ತನಕ ಹೊರಾಂಗಣ ಕಾರ್ಯಕ್ರಮಕ್ಕೆ ನಿಷೇಧ

ಬಿಸಿಲ ತಾಪಕ್ಕೆ 13 ಮಂದಿ ಮೃತ್ಯು ಹಿನ್ನೆಲೆ

Update: 2023-04-19 14:57 IST

ಮುಂಬೈ: ನವಿಮುಂಬೈನಲ್ಲಿ  ರವಿವಾರ ನಡೆದ  ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ 13 ಮಂದಿ ಬಿಸಿಲ ತಾಪ ತಾಳಲಾರದೆ  ಸಾವನ್ನಪ್ಪಿದ ಹಿನ್ನೆಲೆಯಲ್ಲಿ  ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರಕಾರವು ರಾಜ್ಯದಲ್ಲಿ ಬಿಸಿಗಾಳಿಯ ಪರಿಸ್ಥಿತಿಗಳು ಕಡಿಮೆಯಾಗುವವರೆಗೆ ಮಧ್ಯಾಹ್ನ 12ರಿಂದ   ಸಂಜೆ 5 ರ ನಡುವೆ ಹೊರಾಂಗಣ ಕಾರ್ಯಕ್ರಮಗಳನ್ನು ನಿಷೇಧಿಸಿದೆ.

ಈ ವರ್ಷ ಹೋರಾಟಗಾರ ಅಪ್ಪಾಸಾಹೇಬ ಧರ್ಮಾಧಿಕಾರಿಗೆ ಪ್ರಶಸ್ತಿಯನ್ನು ನೀಡಲಾಯಿತು ಹಾಗೂ  ಅವರ ಲಕ್ಷಾಂತರ ಅನುಯಾಯಿಗಳು ತೆರೆದ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸುಡುವ ಬಿಸಿಲಲ್ಲಿ  ತೆರೆದ ಮೈದಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದರು. ರವಿವಾರ ಈ ಪ್ರದೇಶದಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ,   ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಧರ್ಮಾಧಿಕಾರಿಗೆ ಹಸ್ತಾಂತರಿಸಲು ಆಗಮಿಸಿದ್ದರು.

ಆದರೆ ಪ್ರತಿಪಕ್ಷಗಳು ಕಾರ್ಯಕ್ರಮದ ಆಯೋಜನೆಯಲ್ಲಾಗಿರುವ ಲೋಪದ ಬಗ್ಗೆ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರು, ಬಿಸಿಲ ತಾಪದಿಂದ ಆಗಿರುವ  ಸಾವಿನ ಬಗ್ಗೆ ಏಕನಾಥ್ ಶಿಂಧೆ ಸರಕಾರದ ವಿರುದ್ಧ ನರಹತ್ಯೆ ಪ್ರಕರಣವನ್ನು ದಾಖಲಿಸಬೇಕು ಎಂದು ಒತ್ತಾಯಿಸಿದರು.

Similar News