×
Ad

ಜಾತಿ ಜನಗಣತಿ ನಡೆಸಲು ಕಾಂಗ್ರೆಸ್‌ ಆಗ್ರಹಿಸಿದ ಬೆನ್ನಲ್ಲೇ ಕೇಂದ್ರ ಸಚಿವ ರಾಮದಾಸ್‌ ಅಠಾವಳೆಯಿಂದಲೂ ಬೇಡಿಕೆ

Update: 2023-04-19 15:48 IST

ಹೊಸದಿಲ್ಲಿ: ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳಿಂದ ಜಾತಿ ಜನಗಣತಿಗಾಗಿನ ಆಗ್ರಹ ತೀವ್ರಗೊಳ್ಳುತ್ತಿರುವ ಬೆನ್ನಿಗೇ, ನಮ್ಮ ಪಕ್ಷವು ಸುದೀರ್ಘ ಕಾಲದಿಂದ ಜಾತಿ ಜನಗಣತಿಗೆ ಆಗ್ರಹಿಸುತ್ತಿದ್ದು, ಸರ್ಕಾರ ಈ ಕುರಿತು ನಿರ್ಣಯಿಸಬೇಕಿದೆ ಎಂದು ಮಂಗಳವಾರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ ಎಂದು newindianexpress.com ವರದಿ ಮಾಡಿದೆ.

The New Indian Express ದಿನಪತ್ರಿಕೆಯೊಂದಿಗೆ ಮಾತನಾಡಿರುವ ಎನ್‌ಡಿಎ ಮೈತ್ರಿಕೂಟದ ಮಿತ್ರ ಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ನಾಯಕ ಸಚಿವ ಅಠಾವಳೆ, ನಾನು ಈ ಕುರಿತು ಹಲವಾರು ಬಾರಿ ಸಂಸತ್ ಹಾಗೂ ಎನ್‌ಡಿಎ ಸಭೆಗಳಲ್ಲಿ ಒತ್ತಾಯಿಸಿದ್ದು, ಯಾವುದೇ ಫಲಿತಾಂಶ ದೊರೆತಿಲ್ಲ ಎಂದು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿ ಪ್ರವರ್ಗಗಳ ನಿಖರ ಜನಸಂಖ್ಯೆಯನ್ನು ಅಂದಾಜಿಸಲು ಜಾತಿ ಆಧಾರಿತ ಜನಗಣತಿ ನಡೆಯಬೇಕು ಎಂಬುದು ಯಾವಾಗಲೂ ನನ್ನ ಪಕ್ಷದ ನಿಲುವಾಗಿದೆ. ಒಂದು ಬಾರಿ ಈ ಕುರಿತು ಸಮೀಕ್ಷೆ ನಡೆಸಿದರೆ, ಜನಸಂಖ್ಯೆಗನುಗುಣವಾಗಿ ನೀತಿ ನಿರೂಪಣೆ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಅಳವಡಿಸಬಹುದಾಗಿದೆ. ಇದರಿಂದ ಜಾತಿ ಆಧಾರಿತ ಕಡೆಗಣನೆ ಹಾಗೂ ಹಿಂದುಳಿಯುವಿಕೆಯನ್ನು ನಿರ್ಧರಿಸಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹಾಲಿ ಮೀಸಲಾತಿ ಹಂಚಿಕೆಯು ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. 52ರಷ್ಟು ಎಂದು ಅಂದಾಜಿಸಲಾಗಿರುವ 1931ರ ಜನಗಣತಿಯನ್ನು ಅವಲಂಬಿಸಿರುವುದರಿಂದ ಹೊಸದಾಗಿ ಜಾತಿ ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್, ಜೆಡಿಯು, ಆರ್‌ಜೆಡಿ ಹಾಗೂ ಎಎಪಿ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ತಮ್ಮ ಆಗ್ರಹವನ್ನು ತೀವ್ರಗೊಳಿಸಿರುವ ಹೊತ್ತಿನಲ್ಲೇ ಕೇಂದ್ರ ಸಚಿವರ ಈ ಅಭಿಪ್ರಾಯ ಹೊರ ಬಿದ್ದಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಧ್ಯಾಹ್ನ 12ರಿಂದ ಸಂಜೆ 5ರ ತನಕ ಹೊರಾಂಗಣ ಕಾರ್ಯಕ್ರಮಕ್ಕೆ ನಿಷೇಧ

Similar News