×
Ad

ಉಡುಪಿ ಜಿಲ್ಲೆಯಲ್ಲಿ ಬುಧವಾರ 13 ಮಂದಿಯಿಂದ ನಾಮಪತ್ರ ಸಲ್ಲಿಕೆ

Update: 2023-04-19 20:08 IST

ಉಡುಪಿ, ಎ.19: ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಸೇರಿದಂತೆ ಒಟ್ಟು 13 ಮಂದಿ  ಮುಂದಿನ ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಯ ಐದನೇ ದಿನವಾದ ಬುಧವಾರ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. 13 ಮಂದಿ ಅಭ್ಯರ್ಥಿಗಳು ಒಟ್ಟು 18 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ (ಸೆಕ್ಯುಲರ್- ಜೆಡಿಎಸ್) ನಿಂದ ಮನ್ಸೂರ್ ಇಬ್ರಾಹಿಂ, ಪಕ್ಷೇತರರಾಗಿ ಚಂದ್ರ ಹರಿಜನ, ಮಂಜುನಾಥ್ ಕೆ. ನಾಮಪತ್ರ ಸಲ್ಲಿಸಿದ್ದರೆ, ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ  ಭಾರತೀಯ ಜನತಾ ಪಾರ್ಟಿಯಿಂದ ಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. 

ಉಡುಪಿ ವಿಧಾನಸಭಾ ಕ್ಷೇತ್ರದಿಂದ  ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಕರ್ನಾಟಕ) ಅಭ್ಯರ್ಥಿಯಾಗಿ ಶೇಖರ್ ಹಾವಂಜೆ, ಜೆಡಿಎಸ್‌ನಿಂದ ಅಭ್ಯರ್ಥಿ ದಕ್ಷತ್ ಶೆಟ್ಟಿ ಅಲ್ಲದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ. 

ಕಾಪು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನ ಅಭ್ಯರ್ಥಿ ಸಬಿನಾ ಸಮದ್‌, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಅಬ್ದುಲ್ ರಝಾಕ್ ಶಾಬನ್ ಅಹ್ಮದ್, ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ರೆಹಮಾನ್ ನಾಮಪತ್ರ ಸಲ್ಲಿಸಿದ್ದಾರೆ.  ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ದಯಾನಂದ ಶೆಟ್ಟಿ, ಡೇನಿಯಲ್ ಫೆಡ್ರಿಕ್ ರಾಂಜರ್ ಹಾಗೂ  ಬಿಜೆಪಿಯಿಂದ ಸಚಿವ ವಿ.ಸುನೀಲ್ ಕುಮಾರ್ ತಮ್ಮ ನಾಮಪತ್ರಗಳನ್ನು ಸಂಬಂಧಿತ ಚುನಾವಣಾಧಿ ಕಾರಿಗಳಿಗೆ ಸಲ್ಲಿಸಿದ್ದಾರೆ.

ಈ ಮೂಲಕ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ 7, ಕುಂದಾಪುರ ಕ್ಷೇತ್ರದಲ್ಲಿ  8, ಕಾಪು ಕ್ಷೇತ್ರದಲ್ಲಿ 6, ಉಡುಪಿಯಲ್ಲಿ 7 ಹಾಗೂ ಕಾರ್ಕಳ ಕ್ಷೇತ್ರದಲ್ಲಿ ಒಟ್ಟು 14 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದೆ.   

Similar News