×
Ad

ಭಿನ್ನಲಿಂಗಿಗಳಂತೆ ಘನತೆಯ ಬದುಕಿಗೆ ನೆರವಾಗಲು ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಿ: ಸುಪ್ರೀಂಗೆ ಅರ್ಜಿದಾರರ ಮೊರೆ

Update: 2023-04-19 20:57 IST

ಹೊಸದಿಲ್ಲಿ,ಎ.19: ಸಲಿಂಗ ವಿವಾಹಗಳನ್ನು ಒಪ್ಪಿಕೊಳ್ಳಲು ಸಮಾಜದ ಮೇಲೆ ಒತ್ತಡ ಹೇರಲು ತನ್ನ ಪೂರ್ಣಾಧಿಕಾರ, ಪ್ರತಿಷ್ಠೆ ಮತ್ತು ನೈತಿಕ ಅಧಿಕಾರವನ್ನು ಬಳಸುವಂತೆ ಇಂತಹ ವಿವಾಹಗಳಿಗೆ ಕಾನೂನು ಮಾನ್ಯತೆಯನ್ನು ಕೋರಿರುವ ಅರ್ಜಿದಾರರು ಬುಧವಾರ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ. ಇದರಿಂದಾಗಿ ಎಲ್ಜಿಬಿಟಿಕ್ಯೂ ಐಎ ಸಮುದಾಯದ ವ್ಯಕ್ತಿಗಳೂ ಭಿನ್ನಲಿಂಗಿಗಳಂತೆ ಗೌರವವಯುತ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸರಕಾರವು ಮುಂದೆ ಬರಬೇಕು ಮತ್ತು ಸಲಿಂಗ ವಿವಾಹಗಳಿಗೆ ಮಾನ್ಯತೆಯನ್ನು ನೀಡಬೇಕು ಎಂದು ಅರ್ಜಿದಾರರಲ್ಲೋರ್ವರ ಪರ ಹಿರಿಯ ವಕೀಲ ಮುಕುಲ ರೋಹಟ್ಗಿಯವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು.

ವಿಧವಾ ಪುನರ್ವಿವಾಹ ಕುರಿತು ಕಾಯ್ದೆಯನ್ನು ಪ್ರಸ್ತಾಪಿಸಿದ ರೋಹಟ್ ಗೆ ,ಆಗ ಸಮಾಜವು ಅದನ್ನು ಒಪ್ಪಿಕೊಂಡಿತ್ತು, ಕಾನೂನು ಸೂಕ್ತ ಕ್ರಮವನ್ನು ತೆಗೆದುಕೊಂಡಿತ್ತು ಮತ್ತು ಸಾಮಾಜಿಕ ಸ್ವೀಕೃತಿಯು ಅದನ್ನು ಅನುಸರಿಸಿತ್ತು. ಹೀಗಾಗಿ ನ್ಯಾಯಾಲಯವು ಸಮಾಜವು ಸಲಿಂಗ ವಿವಾಹಗಳನ್ನು ಒಪ್ಪಿಕೊಳ್ಳುವಂತೆ ಒತ್ತು ನೀಡುವ ಅಗತ್ಯವಿದೆ. ಈ ನ್ಯಾಯಾಲಯವು ಸಂವಿಧಾನದ 142ನೇ ವಿಧಿಯಡಿ ಪೂರ್ಣಾಧಿಕಾರದ ಜೊತೆಗೆ ನೈತಿಕ ಅಧಿಕಾರ ಮತ್ತು ಸಾರ್ವಜನಿಕ ವಿಶ್ವಾಸವನ್ನು ಹೊಂದಿದೆ. ನಾವು ನಮ್ಮ ಹಕ್ಕುಗಳನ್ನು ಹೊಂದುವುದನ್ನು ಖಚಿತಪಡಿಸಲು ಈ ನ್ಯಾಯಾಲಯದ ಪ್ರತಿಷ್ಠೆ ಮತ್ತು ನೈತಿಕ ಅಧಿಕಾರವನ್ನು ನಂಬಿಕೊಂಡಿದ್ದೇವೆ ’ಎಂದು ಹೇಳಿದರು.

ಸರಕಾರವು ಮುಂದೆ ಬರಬೇಕು ಮತ್ತು ಸಲಿಂಗ ವಿವಾಹಗಳಿಗೆ ಮಾನ್ಯತೆಯನ್ನು ನೀಡಬೇಕು,ಇದು ಸಲಿಂಗಿಗಳೂ ಭಿನ್ನಲಿಂಗಿಗಳಂತೆ ಘನತೆಯ ಬದುಕನ್ನು ಸಾಗಿಸಲು ನೆರವಾಗುತ್ತದೆ ಎಂದು ರೋಹಟ್ ಗೆ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಎಸ್.ಆರ್.ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್.ನರಸಿಂಹ ಅವರನ್ನೂ ಒಳಗೊಂಡ ಪೀಠಕ್ಕೆ ತಿಳಿಸಿದರು.

ಬುಧವಾರ ಎರಡನೇ ದಿನದ ವಿಚಾರಣೆಯ ಆರಂಭದಲ್ಲಿ ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಅರ್ಜಿಗಳ ವಿಚಾರಣೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೂ ಕಕ್ಷಿದಾರರನ್ನಾಗಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿರುವ ಹೊಸ ಅಫಿಡವಿಟ್ ಅನ್ನು ಸಲ್ಲಿಸಿದರು.

ಇದನ್ನು ವಿರೋಧಿಸಿದ ರೋಹಟ್ ಗೆ ,ಅರ್ಜಿಗಳು ಕೇಂದ್ರೀಯ ಕಾನೂನು ಮತ್ತು ವಿಶೇಷ ವಿವಾಹಗಳ ಕಾಯ್ದೆಯನ್ನು ಪ್ರಶ್ನಿಸಿವೆ. ವಿಷಯವು ಸಂವಿಧಾನದ ಏಳನೇ ಶೆಡ್ಯೂಲ್ ನ ಲ್ಲಿಯ ಸಮವರ್ತಿ ಪಟ್ಟಿಯಲ್ಲಿದೆ ಎಂಬ ಏಕಮಾತ್ರ ಕಾರಣಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ಗಳನ್ನು ಹೊರಡಿಸುವ ಅಗತ್ಯವಿಲ್ಲ ಎಂದು ವಾದಿಸಿದರು.

Similar News