×
Ad

10,000 ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭಿಸಿದ ಮೆಟಾ

Update: 2023-04-19 21:05 IST

ಹೊಸದಿಲ್ಲಿ,ಎ.19: ಹೆಚ್ಚಿನ ದಕ್ಷತೆಯನ್ನು ಸಾಧಿಸಲು ತಂಡಗಳ ಪುನರ್ರಚನೆಗೆ ಮುಂದಾಗಿರುವ ಫೇಸ್ಬುಕ್ನ ಮಾತೃಸಂಸ್ಥೆ ತನ್ನ 10,000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿದೆ ಎಂದು ಕಂಪನಿಯ ಮೆಮೊ ಉಲ್ಲೇಖಿಸಿ ಬ್ಲೂಮ್ ಬರ್ಗ್ ನ್ಯೂಸ್ ವರದಿ ಮಾಡಿದೆ. ಉದ್ಯೋಗ ಕಡಿತ ಪ್ರಕ್ರಿಯೆಯು ಫೇಸ್‌ಬುಕ್‌, ವಾಟ್ಸ್ಆ್ಯಪ್, ಇ‌ನ್‌ಸ್ಟಾಗ್ರಾಂ ಮತ್ತು ರಿಯಾಲಿಟಿ ಲ್ಯಾಬ್ಸ್ ಮೇಲೆ ಪರಿಣಾಮ ಬೀರಲಿದೆ. ವೆಚ್ಚಗಳನ್ನು ಕಡಿಮೆಗೊಳಿಸುವ ಪ್ರಯತ್ನದ ಭಾಗವಾಗಿ ಕಂಪನಿಯ 10,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಮೆಟಾ ಸ್ಥಾಪಕ ಮಾರ್ಕ್ ಝುಕೆರ್ಬರ್ಗ್ ಅವರು ಕಳೆದ ಮಾರ್ಚ್ ನಲ್ಲಿ ಪ್ರಕಟಿಸಿದ್ದರು.ಮೇ ತಿಂಗಳಿನಲ್ಲಿ ಇನ್ನೊಂದು ಸುತ್ತಿನ ಉದ್ಯೋಗಿಗಳ ವಜಾ ನಡೆಯಲಿದೆ.

ಮೆಟಾ ಕಳೆದ ವರ್ಷದ ನವಂಬರ್ ನಲ್ಲಿ ತನ್ನ ಕಾರ್ಯಪಡೆಯ ಸುಮಾರು ಶೇ.13ರಷ್ಟು ಅಥವಾ ಸುಮಾರು 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕಂಪನಿಯು ಮೊದಲ ತ್ರೈಮಾಸಿಕದುದ್ದಕ್ಕೂ ತನ್ನ ಹೊಸ ನೇಮಕಾತಿಗಳನ್ನು ನಿಲ್ಲಿಸಿತ್ತು. ಸಿಲಿಕಾನ್ ವ್ಯಾಲಿಯ ಇತರ ಟೆಕ್ ಕಂಪನಿಗಳೂ ಇಂತಹುದೇ ವೆಚ್ಚ ಕಡಿತ ಕ್ರಮಗಳನ್ನು ತೆಗೆದುಕೊಂಡಿವೆ.

ತನ್ನ ಮ್ಯಾನೇಜರ್ ಗಳಿಗೆ ಮೆಟಾ ವಿತರಿಸಿರುವ ಮೆಮೊದಲ್ಲಿ, ತಂಡಗಳನ್ನು ಮರುಸಂಘಟಿಸಲಾಗುತ್ತದೆ ಮತ್ತು ಉಳಿದ ಉದ್ಯೋಗಿಗಳನ್ನು ನೂತನ ಮ್ಯಾನೇಜರ್ ಗಳ ಅಧೀನದಲ್ಲಿ ಕೆಲಸ ಮಾಡಲು ಮರುನಿಯೋಜಿಸಲಾಗುವುದು ಎಂದು ತಿಳಿಸಲಾಗಿದೆ. ಉದ್ಯೋಗ ವಜಾ ಆಘಾತವನ್ನು ಅರಗಿಸಿಕೊಳ್ಳಲು ಕಾಲಾವಕಾಶ ನೀಡುವ ದೃಷ್ಟಿಯಿಂದ ಮೆಟಾ ವರ್ಕ್ ಫ್ರಮ್ ಹೋಮ್ ಸಾಧ್ಯವಿರುವವರು ಹಾಗೆ ಮಾಡಬಹುದು ಎಂದು ತನ್ನ ಎಲ್ಲ ಉತ್ತರ ಅಮೆರಿಕ ಸಿಬ್ಬಂದಿಗಳಿಗೆ ತಿಳಿಸಿದೆ.

ಉದ್ಯೋಗ ವಜಾ ಪ್ರಕ್ರಿಯೆಯು ಸಾವಿರಾರು ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ ಮತ್ತು ಹಲವರು ಸಂಕಷ್ಟದ ಸಮಯದಲ್ಲಿ ನಿರುದ್ಯೋಗಿಗಳಾಗಿ ಉಳಿಯಲಿದ್ದಾರೆ. ಆದರೆ ಕಂಪನಿಯ ದೀರ್ಘಾವಧಿ ಯಶಸ್ಸಿಗಾಗಿ ಈ ಕ್ರಮವು ಅಗತ್ಯವಾಗಿದೆ ಎಂದು ಹೇಳಿದ್ದ ಝಕೆರ್ಬರ್ಗ್,ಬೇರ್ಪಡಿಕೆ ಪ್ಯಾಕೇಜ್ಗಳು ಮತ್ತು ಉದ್ಯೋಗ ನಿಯೋಜನೆ ಸೇವೆಗಳು ಸೇರಿದಂತೆ ಪೀಡಿತ ಉದ್ಯೋಗಿಗಳಿಗೆ ಬೆಂಬಲವನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.

Similar News