×
Ad

ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ: ಶಿರ್ಲಾಲು ಅರಸುಬೈಲಿಗೆ ಅಧಿಕಾರಿಗಳ ಭೇಟಿ

Update: 2023-04-19 21:11 IST

ಉಡುಪಿ, ಎ.19: ಕಳೆದ ಐದು ತಿಂಗಳಿನಿಂದ ಗ್ರಾಮದ ಜನತೆಗೆ ತುರ್ತು ಅವಶ್ಯಕತೆಯಾದ ನೂತನ ಸೇತುವೆಗೆ ಸಂಪರ್ಕ ರಸ್ತೆ ಕಲ್ಪಿಸಲು ವಿಫಲವಾದ ಹಿನ್ನೆಲೆಯಲ್ಲಿ  ಕಾರ್ಕಳ ತಾಲೂಕಿನ ಅರಸುಬೈಲು ಜಡ್ಡು, ಗಾಂಧಿಬೆಟ್ಟು, ಶಿರ್ಲಾಲು ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಘೋಷಣೆ ಮಾಡಿರುವ ಗ್ರಾಮಗಳಿಗೆ ಜಿಲ್ಲಾ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ತೆರಳಿ ಗ್ರಾಮಸ್ಥರ ಅಹವಾಲುಗಳನ್ನು ಅರಿತು ಅವರ ಮನವೊಲಿಸುವ ಕಾರ್ಯ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಅಜೆಕಾರು-ಶಿರ್ಲಾಲು ಸಂಪರ್ಕ ಕೊಂಡಿಯಾದ ಮಂಗಳಬಾಕ್ಕಾರು ಬಳಿ ಸರಕಾರದಿಂದ ಮಂಜೂರಾಗಿ 3.5 ಕೋಟಿ ರೂ.ವೆಚ್ಚದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ, ಕಳೆದ 5 ತಿಂಗಳುಗಳಿಂದ ಗ್ರಾಮಸ್ಥರ ಸತತ ಮನವಿಯ ಹೊರತಾಗಿಯೂ ಸಂಪರ್ಕ ರಸ್ತೆಯನ್ನು ನಿರ್ಮಿಸದ ಹಿನ್ನೆಲೆಯಲ್ಲಿ ಶಿರ್ಲಾಲು ಗ್ರಾಮದ ಅರಸುಬೈಲು, ಜಡ್ಡು, ಗಾಂಧಿಬೆಟ್ಟುವಿನ  100ಕ್ಕೂ ಅಧಿಕ ಮತದಾರರು ಮೇ 10ರ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿ ರುವುದಾಗಿ ಪ್ರಕಟಿಸಿದ್ದರು. 

ಗ್ರಾಮಸ್ಥರು ತಮ್ಮ ಈ ನಿರ್ಧಾರವನ್ನು ಜಿಲ್ಲೆಯ ಚುನಾವಣಾಧಿಕಾರಿಗಳಾದ  ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಬರೆದಿರುವ ಸಹಿ ಹಾಕಿದ ಪತ್ರದಲ್ಲಿ ಅವರು ತಮ್ಮ ನಿರ್ಧಾರವನ್ನು ತಿಳಿಸಿದ್ದರು. 

ಕಳೆದ 5 ತಿಂಗಳಿನಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಾಗೂ ಸ್ಥಳೀಯಾಡಳಿತ ಅಧಿಕಾರಿಗಳಿಗೆ ಸತತ ಮನವಿ ಸಲ್ಲಿಸಿದರೂ ಸಾರ್ವಜನಿಕರಿಗೆ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ಅವರು 5-6 ಕಿ.ಮೀ.ಸುತ್ತು ಬಳಸಿ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಪತ್ರದಲ್ಲಿ ದೂರಿದ್ದರು.

‘ಸೇತುವೆಯನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಾಡಲಾಗಿದೆ. ಇದೀಗ ಇಲಾಖೆಯ ಇಂಜಿನಿಯರ್‌ಳನ್ನು ಸ್ಥಳಕ್ಕೆ ಕಳುಹಿಸಿ ಗ್ರಾಮಸ್ಥರ ಅಹವಾಲು ಆಲಿಸಿ, ಯಾವುದಾದರೂ ಅನುದಾನದ ಮೂಲಕ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಲಾಗಿದೆ.’ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

Similar News