ಪತ್ರಕರ್ತ ಫಹಾದ್ ಶಾ ಬಂಧನ ರದ್ದುಗೊಳಿಸಿದ ಹೈಕೋರ್ಟ್

Update: 2023-04-19 16:35 GMT

ಶ್ರೀನಗರ, ಎ. 19: ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿಯಲ್ಲಿ ಪತ್ರಕರ್ತ ಫಹಾದ್ ಶಾ ಬಂಧನವನ್ನು ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಅಲ್ಲದೆ, ಅಧಿಕಾರಿಗಳು ಮಾತು ಹಾಗೂ ಕೃತಿಯಲ್ಲಿ ಪ್ರಕ್ರಿಯಾತ್ಮಕ ಅಗತ್ಯಗಳನ್ನು ಅನುಸರಿಸಿಲ್ಲ ಎಂದು ಅಭಿಪ್ರಾಯಿಸಿದೆ. 

ಆದರೆ, ಸುದ್ದಿ ಪೋರ್ಟಲ್ ‘ದಿ ಕಾಶ್ಮೀರ್ ವಲ್ಲಾ’ದ ಪ್ರಧಾನ ಸಂಪಾದಕರಾಗಿರುವ ಫಹಾದ್ ಶಾ ಅವರು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪವನ್ನು ಎದುರಿಸುತ್ತಿರುವುದರಿಂದ ಕಾರಾಗೃಹದಲ್ಲೇ ಇರಲಿದ್ದಾರೆ. 

ಪೊಲೀಸರು ಕಳೆದ ವರ್ಷ ಫೆಬ್ರವರಿಯಲ್ಲಿ ಶಾ ಅವರನ್ನು ಬಂಧಿಸಿದ್ದರು. ಅವರ ವಿರುದ್ಧ ಭಯೋತ್ಪಾದನೆ ವೈಭವೀಕರಣ, ನಕಲಿ ಸುದ್ದಿಗಳ ಹರಡುವಿಕೆ ಹಾಗೂ ಹಿಂಸಾಚಾರಕ್ಕೆ ಉತ್ತೇಜನದ ಆರೋಪವನ್ನು ಹೊರಿಸಿದ್ದರು. ಆದರೆ, ಅವರ ವಿರುದ್ಧ ದಾಖಲಿಸಲಾದ ಮೂರು ಪ್ರಕರಣಗಳಲ್ಲಿ ಎರಡರಲ್ಲಿ ಜಾಮೀನು ಪಡೆದಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾ ಅವರನ್ನು ಜಮ್ಮು ಹಾಗೂ ಕಾಶ್ಮೀರ ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿಯಲ್ಲಿ ಮುನ್ನೆಚ್ಚರಿಕೆ ಬಂಧನಕ್ಕೆ ಒಳಪಡಿಸುವಂತೆ ಆದೇಶ ನೀಡಿದ್ದರು.

ಕಳೆದ ವಾರ ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯದ  ನ್ಯಾಯಮೂರ್ತಿ ವಾಸಿಂ ಸಾದಿಕ್ ನಗ್ರಾಲ್ ಅವರು ತಡೆಗಟ್ಟುವ ಬಂಧನ  ಆದೇಶವನ್ನು ರದ್ದುಗೊಳಿಸಿದ್ದಾರೆ. ತನ್ನ ತೀರ್ಪಿನಲ್ಲಿ  ಅವರು ಶಾ ಬಂಧನಕ್ಕೆ ಉಲ್ಲೇಖಿಸಲಾದ ಬುನಾದಿ ಯಾವುದೇ ನಿರ್ದಿಷ್ಟ ವಿವರಗಳಿಲ್ಲದ, ಅಸ್ಪಷ್ಟ ಪ್ರತಿಪಾದನೆ ಎಂದು ಹೇಳಿದ್ದಾರೆ.  

ಬಂಧನ ಆದೇಶ ಜಾರಿಗೊಳಿಸುವುದಕ್ಕೆ ಆಧಾರವಾದ ದಾಖಲೆಗಳ ಪ್ರತಿಯನ್ನು ತನಗೆ ನೀಡಿಲ್ಲ ಎಂಬ ಪತ್ರಕರ್ತನ ಪ್ರತಿಪಾದನೆಯನ್ನು ಜಮ್ಮು ಹಾಗೂ ಕಾಶ್ಮೀರ ಸರಕಾರ ನಿರಾಕರಿಸಿಲ್ಲ ಎಂದು ನ್ಯಾಯಮೂರ್ತಿಗಳು ಗಮನಿಸಿದರು. 
ಶಾ ಅವರ ವಿರುದ್ಧ ಮೂರನೇ ಪ್ರಕರಣದಲ್ಲಿ ಜಾಮೀನು ಪಡೆಯದ ಕಾರಣ ಅವರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಕಾರಣ ಇಲ್ಲ ಎಂದು ಉಚ್ಚ ನ್ಯಾಯಾಲಯ ಬೆಟ್ಟು ಮಾಡಿದೆ.

Similar News