×
Ad

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ: ಸುದ್ದಿ ಪ್ರಸಾರಕ್ಕೆ ನ್ಯಾಯಾಲಯ ನಿರ್ಬಂಧ

Update: 2023-04-19 22:08 IST

ಹೊಸದಿಲ್ಲಿ, ಎ. 19:  ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಆರೋಪ ಪಟ್ಟಿಯ ವಿಷಯವನ್ನು ಪ್ರಸಾರ ಮಾಡದಂತೆ ಎಲ್ಲ ಸುದ್ದಿ ವಾಹಿನಿಗಳಿಗೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ನಿರ್ಬಂಧ ವಿಧಿಸಿದೆ. ದಿಲ್ಲಿ ಪೊಲೀಸರು ದಾಖಲಿಸಿದ ಅರ್ಜಿಯನ್ನು ಇತ್ಯರ್ಥಪಡಿಸುವವರೆಗೆ ಈ ವಿಷಯಗಳನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡದಂತೆ ನಿರ್ದೇಶಿಸಲು  ಕೇಂದ್ರ ಸರಕಾರಕ್ಕೆ ನ್ಯಾಯಮೂರ್ತಿ ಭಟ್ನಗರ್ ಅವರು ಸೂಚಿಸಿದ್ದಾರೆ. 

ಪ್ರಕರಣದ ತನಿಖೆಯ ಸಂದರ್ಭ ಸಂಗ್ರಹಿಸಲಾದ ಆರೋಪ ಪಟ್ಟಿ ಹಾಗೂ ಅಂತಹ ಇತರ ಸಾಮಗ್ರಿಗಳು ಒಳಗೊಂಡಿರುವ ಗೌಪ್ಯ ಮಾಹಿತಿಗಳನ್ನು   ಪ್ರಕಟಿಸುವುದು, ಮುದ್ರಿಸುವುದು ಹಾಗೂ ಪ್ರಸಾರ ಮಾಡುವುದಕ್ಕೆ ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ ಹೇರುವಂತೆ ಕೋರಿ ದಿಲ್ಲಿ ಪೊಲೀಸರು ಸಲ್ಲಿಸಿದ ಅರ್ಜಿಯ ಮೇಲೆ ಅವರು ಈ ಆದೇಶ ನೀಡಿದ್ದಾರೆ. 

ಆರೋಪಿ ಅಫ್ತಾಬ್ ಪೂನಾವಾಲ ಅವರ ಮಂಪರು ಪರೀಕ್ಷೆಯ ವೀಡಿಯೊ ‘ಆಜ್ ತಕ್’ ಸುದ್ದಿ ವಾಹಿನಿಗೆ ಲಭ್ಯವಾಗಿದೆ. ಆದರೆ, ಈ ಅಂಶವನ್ನು ಪ್ರದರ್ಶಿಸುವುದಕ್ಕೆ ವಿಚಾರಣಾ ನ್ಯಾಯಾಲಯ ವಾಹಿನಿಗೆ ನಿರ್ಬಂಧ ವಿಧಿಸಿದೆ ಎಂದು ವಿಶೇಷ ಸರಕಾರಿ ವಕೀಲ ಅಮಿತ್ ಪ್ರಸಾದ್ ಅವರು ಹೇಳಿದರು. 

ಆದರೆ, ಇತರ ಎಲ್ಲಾ ವಾಹಿನಿಗಳಿಗೆ ಕೂಡ ಇದೇ ರೀತಿ ಆದೇಶ ನೀಡುವ ಅಗತ್ಯತೆ ಇದೆ. ಯಾಕೆಂದರೆ, ಈ ವೀಡಿಯೊ ಇತರ ವಾಹಿನಿಗಳಿಗೂ ಶೇರ್ ಆಗಿರುವ ಸಾಧ್ಯತೆ ಇದೆ. ಈ ವಾಹಿನಿಗಳು ವೀಡಿಯೊವನ್ನು ಪ್ರಸಾರ ಮಾಡಿದರೆ, ಅದು ಪ್ರಕರಣದ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದ್ದಾರೆ. 
ಉಚ್ಚ ನ್ಯಾಯಾಲಯ ಈ ಪ್ರಕರಣವನ್ನು ಆಗಸ್ಟ್ 3ರಂದು ಮುಂದಿನ ವಿಚಾರಣೆಗೆ ಪಟ್ಟಿ ಮಾಡಿದೆ.

Similar News